Latest Entries »

ಕವರ್ ಪೇಜ್

ಕವರ್ ಪೇಜ್


 
ಲೆಕ್ಕವಿಲ್ಲದಷ್ಟು ರೇಖೆಗಳ ರಾಶಿ..ಸರ ಸರನೆ ಹರಿದಾಡುವ ಅದ್ಭುತ ಫೋರ್ಸ್ ಹೊಂದಿದ ಡೇವಿಡ್ ಲೆವಿನ್ ಇಪ್ಪತ್ತನೆ ಶತಮಾನದ ರೇಖಾ ಮಾಯಾವಿ.!ಗೆರೆಗಳಲ್ಲಿ ಎಳ್ಳು ಇಕಾನಮಿ ಪಾಲಿಸದ ಲೆವಿನ್ ಜಗತ್ತಿನ ಶ್ರೇಷ್ಠ ಕ್ಯಾರಿಕೇಚ ರಿಸ್ಟ್ .ಅವರ ಪುಸ್ತಕ ‘ಪೆನ್ಸ್ ಅಂಡ್ ನೀಡಲ್ಸ್’ ನಲ್ಲಿ ನಿಮಗೆ ಅಮೇರಿಕನ್ ,ಯುರೋಪಿಯನ್ ,ರಷ್ಯನ್ ದೇಶಗಳ ಖ್ಯಾತ ವಿಜ್ಞಾನಿಗಳು,ಲೇಖಕರು,ಕಲಾವಿದರು ,ಸಂಗೀತಗಾರರು,ನಿಮ್ಮನ್ನು ಹೊಸ ರೂಪಗಳಿಂದ ಬೆಚ್ಚಿ ಬೀಳಿಸುತ್ತಾರೆ.ಪಜಲ್ ಥರ ಗೆರೆಗಳನ್ನು ಎಳೆದಾಡುವ ಲೆವಿನ್ ಮೊನ್ನೆ ಡಿಸಂಬರ್ ೨೯ ,೨೦೦೯ ರಂದು ನಮ್ಮನ್ನು ಅಗಲಿದ್ದಾರೆ.ಕ್ರೋಕ್ವಿಲ್ ನಿಬ್ ಲೆವಿನ್ ಕೈಯಲ್ಲಿ ಬೆಣ್ಣೆ ಯಂತಾಗುತ್ತದೆ.೧೯೨೬ ರಲ್ಲಿ ಹುಟ್ಟಿದ ಲೆವಿನ್ ಒಬ್ಬ ಬಟ್ಟೆ ಕಾರ್ಮಿಕನ ಮಗ.ತನ್ನ ಹತ್ತನೇ ವಯಸ್ಸಿನಲ್ಲಿ ಚಿತ್ರಗಳ ಬಗ್ಗೆ ಹುಚ್ಚು ಬೆಳೆಸಿಕೊಳ್ಳುತ್ತಾನೆ.ಅಸಂಗತ ಚಿತ್ರಕಲೆಯ ಬಗ್ಗೆ ತೀವ್ರ ಬೇಸರಗೊಳ್ಳುವ ಲೆವಿನ್ ರಿಯಲ್ಸ್ಟಿಕ್ ಕಲೆಯ ಬಗ್ಗೆ ವಿಪರೀತ ಕುತೂಹಲ ಹೊಂದಿದ್ದ.
ಯಾವುದೋ ಮೂಲೆಯಲ್ಲಿ ವಿಚಿತ್ರ ಅಸಮಧಾನ ಹೊಂದಿದ್ದ ಲೆವಿನ್ ೧೯೬೦ ರಲ್ಲಿ ನ್ಯೂ ಯಾರ್ಕ್ ರಿವ್ಯೂ ಆಫ್ ಬುಕ್ಸ್ ನಲ್ಲಿ ಚಿತ್ರಿಸಿದ್ದ ಕ್ಯಾರಿಕೇಚ ರ್ಸ್ ಏಕಾ ಎಕಿ ಜಗತ್ತೆಲ್ಲ ಹೆಸರುವಾಸಿಯಾಗುತ್ತವೆ.ಅವನ ಚಿತ್ರಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದುಬಿಡುತ್ತದೆ.ಥಟ್ಟನೆ ಸ್ಟಾರ್ ಆಗಿಬಿಡುತ್ತಾನೆ ಲೆವಿನ್.
ನೂರು ನೂರು ,.ಸಾವಿರ ಸಾವಿರ ಗೆರೆಗಳ ಸರದಾರ ಲೆವಿನ್ ಇಂದು ಜಗತ್ತಿನ ಸಾಕಷ್ಟು ಜನ ಕಾರ್ಟುನಿಸ್ಟ್ ರಿಗೆ ಗುರು ಆಗಿದ್ದಾರೆ,.ಲೆವಿನ್ ಚಿತ್ರಗಳನ್ನು ನೋಡುತ್ತಿದ್ದರೆ ನಮಗೆ ತಕ್ಷಣ ‘ಶಾಕ್ ‘ಹೊಡೆಸಿ ಕೊಂಡ ನ್ತಾಗುತ್ತದೆ .ಚಿತಗಳ ಲ್ಲಿನ ವಿದ್ಯುತ್ ಅದು.The New York Times, The Washington Post, Rolling Stone Magazine, Sports Illustrated, New York Magazine, Time, Newsweek, The New Yorker, The Nation, Playboy, ಗಳಂತಹ ಲೆಕ್ಕವಿಲ್ಲದಷ್ಟು ಪತ್ರಿಕೆಗಳಿಗೆ ಲೆವಿನ್ ದುಡಿದಿದ್ದ.

 
‘ಛೆ ಛೆ ಏನು ಲೈಫ್ ಕಣ್ರೀ ಇದು..ಅದೇ ಮನೆ,ಅದೇ ಆಫೀಸು,ಅದೇ ರೊಟೀನ್ ಮುಖಗಳು..ಅದೇ ಹೆಂಡತಿ, ಅದೇ ಬಸ್ ಎಲ್ಲಾ ಬೋರ್ ಸ್ವಾಮಿ ..ದಿನಾ ಹೀಗೆ ಯಾರಿಗೆ ಬೇಕ್ರೀ ಈ ಟೇಸ್ಟ್ ಲೆಸ್ ಲೈಫು ..ಸತ್ರೆ ಸುಖ ನೋಡ್ರಿ “ಅಂತ ನಿಮಗೇನಾದ್ರೂ ಆಗಾಗ ಅಥವಾ ಅನೇಕ ಸಲ ಅನಿಸುತ್ತಿರಬಹುದಲ್ವಾ?
(ಹಾಗಂತ ಅನಿಸಲೇ ಬೇಕಂತ ಏನೂ ನಿಯಮ ಇಲ್ಲ ಬಿಡಿ)ಆದರೆ ಇಂಥದರಲ್ಲೇ  ಸುಖ ಇದೆ ಕಣ್ರೀ ,ಹೊಸತನ ಇದೆ..ನಿಮಗೆ ಅದು ಕಾಣ್ತಿಲ್ಲ ಅಂದ್ರೆ ನಿಮ್ಮಲ್ಲೇ ಏನೋ ಸಮಸ್ಯೆ ಇದೆ ಅಂತ ಅರ್ಥ ..ಅಂತಾನೆ ಫ್ರೆಂಚ್ ಕಾರ್ಟೂನಿಸ್ಟ್ ಸೆಂಪೆ .
ಜಗತ್ತಿನ ಪುಟ್ಟ ಪುಟ್ಟ ಸಂತಸಗಳು ಮತ್ತು ಕ್ಷಣ ಹೊತ್ತಿನ ಸೋಲುಗಳು ,ಸಿಲ್ಲಿ ಸಿಲ್ಲಿ ಹುಚ್ಚುಗಳು ,ತಕ್ಷಣದ ಖುಷಿಗಳು ,ಕೋಪ ತಾಪಗಳು ಮತ್ತು ಅನುನಿತ್ಯದ
ಜಗಳಗಳಲ್ಲಿ ಅದ್ಭುತವಾದ ಹಾಸ್ಯ ವಿರುತ್ತದೆ.ಅವರ ಮುಗ್ಧತೆ,ಆವೇಶಗಳು,ಹುಂಬತನಗಳು,ದಿಮಾಕುಗಳು ಸೆಂಪೆಯ ಕ್ರೋಕ್ವಿಲ್ ನಿಬ್ ನಲ್ಲಿ ಚೆಂದನೆಯ ನಗಿಸುವ ಕಾರ್ಟೂನ್ ಗಳಾಗುತ್ತವೆ.ಪ್ರತಿನಿತ್ಯ ಜಗಳವಾಡುವ ,ಹೊಡೆದಾಡುವ ಗಂಡ ಹೆಂಡಿರ ನಡುವಿನಿಂದಲೇ ೧೩ ಭಾಗಗಳ ಕಾರ್ಟೂನ್ ಎಪಿಸೋಡ್ ಎಳೆದು ಬಿಡುತ್ತಾನೆ.
ದೊಡ್ಡ ದೊಡ್ಡ ಬಂಗಲೆಗಳಲ್ಲಿನ ಚಿಕ್ಕ ಚಿಕ್ಕ ಮನುಷ್ಯರು ,ಸಣ್ಣ ಸಣ್ಣ ಖುಷಿಗಳಿಗಾಗಿ ಜೇಬುಗಳನ್ನು ತಡಕಾಡುತ್ತಾ ಅಪ್ ಸೆಟ್ ಆಗೋದು ಇಂಥವೆಲ್ಲ ಸೆಂಪೆ ಗೆ ಸೊಗಸಾದ ಕಾರ್ಟೂನ್ ಸಬ್ಜೆಕ್ಟ್ ಗಳಾಗುತ್ತವೆ.
ಜೀನ್ ಜಾಕ್ ಸೆಂಪೆ (Jeen Jacques Semp’e)ಗೆ ಸದ್ಯ ೭೭ ವರ್ಷ.ಜಗತ್ತಿನ ಲೆಕ್ಕ ವಿಲ್ಲದಷ್ಟು ಪತ್ರಿಕೆಗಳಿಗೆ ಕಾರ್ಟೂನು ಗಳನ್ನೂ ಮಾಡಿದ್ದಾರೆ.ಪ್ರತಿಷ್ಟಿತ ಕಾರ್ಪೋರೆಟ್ ಸಂಸ್ಥೆಗಳಿಗೆ ಭಿತ್ತಿ ಚಿತ್ರಗಳನ್ನು ಮಾಡಿದ್ದಾರೆ.ಆಸ್ಟರಿಕ್ಸ್  ಕಾಮಿಕ್ಸ್ ಸೃಷ್ಟಿ ಕರ್ತರಲ್ಲಿ ಒಬ್ಬರಾದ ರೆನೆಗಾಸ್ಕಿಯೊಂದಿಗೆ ಸೇರಿ ಮತ್ತೊಂದು ವಿಚಿತ್ರವಾದ ಕಾಮಿಕ್ ಸಾಹಸವನ್ನು ಮಾಡಿದ್ದಾನೆ.ವಿಪರೀತವಾಗಿ ತಲೆ ತಿನ್ನೋರು,ವಿಚಿತ್ರವಾಗಿ ಕೊರೆಯೋರು,ಸುಮ್ಮನೆ ನಾನ್ ಸ್ಟಾಪ್ ಬಡಾಯಿ ಕೊಚ್ಚಿ ಕೊಳ್ಳೋರು,ಸೂಡೋ ಇಂಟೆಲೆಕ್ಟುವಲ್ಸ್ ,ಸಮಯ ಸಿಕ್ರೆ ಹೆಂಡತಿಯನ್ನ ಹೇಗಾದ್ರೂ ಮಾಡಿ ಮುಗಿಸಲು ಯೋಚಿಸುವ ಗಂಡಂದಿರು,ಗಂಡನಿಂದ ಬೇಸತ್ತ ಹೆಣ್ಣು ಮಕ್ಕಳು ಹೀಗೆ ಚಿತ್ರ ವಿಚಿತ್ರ ಸಂಗತಿಗಳ ಮೇಲೆ ,ವಿಷಯಗಳ ಮೇಲೆ ಸೆಂಪೆ ಮಾಡಿದ ಕಾರ್ಟೂನುಗಳನ್ನೂ ಓದಿ ಓದಿ ನೋಡಿ ನೋಡಿ ಸಾಯಬೇಕಷ್ಟೇ.!
ಒಬ್ಬ ಕಲಾವಿದ ಬದುಕನ್ನು ನೋಡುವ ರೀತಿ ನಿಮಗೆ ಗೊತ್ತಾಗಬೇಕಾದರೆ ನೀವು ಸೆಂಪೆ ಯನ್ನು ನೋಡಿ.. ಸೂಕ್ಷ್ಮತೆಯೇ ಜೀವಾಳವಾದ ಅವನ ಕಾರ್ಟೂನು ಗಳನ್ನು ನೋಡಿ.ನಿಮಗೆ ಖಂಡಿತವಾಗಿಯೂ ಜ್ಞಾನೋದಯ ವಾಗುತ್ತದೆ.ಅವನ ಕಾರ್ಟೂನು ಸಂಗ್ರಹಗಳ ಶೀರ್ಷಿಕೆ ನೋಡಿ.”Nothing is simple,every thing is complicated”,sunny spells and mixed messages,”womens and childrens are first” ಹೀಗೆ..
ನಮ್ಮಲ್ಲೊಂದು ಭ್ರಮೆ ಇದೆ.ರಾಜಕೀಯ ಕಾರ್ಟೂನುಗಳ ಹೊರತಾಗಿ ಬೇರೆ ಕಾರ್ಟೂನುಗಳು ,ಕಾರ್ಟೂನ್ ಗಳೇ ಅಲ್ಲ ಅಂತ.ದಯಮಾಡಿ ಆ ಅಜ್ಞಾನ ದಿಂದ ಹೊರಬಂದು ಸೆಂಪೆ ಕಾರ್ಟೂನುಗಳನ್ನು ನೋಡಿ ನಿಮಗೆ ಗೊತ್ತಾಗುತ್ತದೆ ಹೊಸ ಜಗತ್ತಿನ ಬಗ್ಗೆ.
ಸೆಂಪೆ ಯ ಬಾಲ್ಯ ಕೂಡ ವಿಚಿತ್ರವಾಗಿದೆ.೧೯೩೨ ರಲ್ಲಿ ಜನಿಸಿದ ಸೆಂಪೆ ತನ್ನ ಅತಿರೇಕದ ತುಂಟ ತನದಿಂದ ಮತ್ತು ಅಶಿಸ್ತಿನ ವರ್ತನೆಯಿಂದ ಶಾಲೆಯಿಂದ ಹೊರ ದಬ್ಬಲ್ಪಡುತ್ತಾನೆ.ಮುಂದೆ ಅಂಚೆ ಕಚೇರಿ ,ಬ್ಯಾಂಕ್ ,ರೇಲ್-ರಸ್ತೆ ಸಿಬ್ಬಂದಿ ಯಂತಹಹುದ್ದೆಗಳಿಗೆ ಎಷ್ಟೇ  ಪ್ರಯತ್ನಿಸಿದರೂ ಯಶಸ್ಸು ಕಾಣುವದಿಲ್ಲ.ಪ್ರತಿ ಪರೀಕ್ಷೆಯಲ್ಲೂ ಫೇಲ್ ಆಗುತ್ತಲೇ ಹೋಗುತ್ತಾನೆ.ಕೊನೆಗೆ ತಲೆ ಕೆಟ್ಟು ಮನೆ ಮನೆ ತಿರುಗುತ್ತ ಹಲ್ಲು ಪುಡಿ ಮಾರಲು ತೊಡಗುತ್ತಾನೆ.
ಇದಕ್ಕೂ ಮೊದಲು ಸ್ವಲ್ಪ ಕಾಲ  ಸೆಂಪೆ ಸೈಕಲ್ ಮೇಲೆ ವೈನ್ ಅನ್ನು ಮಾರಾಟ ಮಾಡುವ ಉದ್ಯೋಗವನ್ನು ಮತ್ತು ಮಕ್ಕಳ ಕ್ಯಾಂಪ್ ಒಂದರಲ್ಲಿ ಸೂಪರ್ವೈಜರ್ ಆಗಿಯೂ  ದುಡಿದಿದ್ದ.
೧೯೫೦ ರಲ್ಲಿ ಸೆಂಪೆ ಏಕಾಏಕಿ ಸೈನ್ಯದ ಕಡೆ ಆಕರ್ಷಿತ ನಾಗಿ ಸೈನ್ಯ ಸೇರುತ್ತಾನೆ.”ಅದೊಂದೇ ಜಾಗ ನನಗೆ ಉಣ್ಣಲು ಊಟ ಮತ್ತು ಮಲಗಲು ಹಾಸಿಗೆ ಕೊಟ್ಟದ್ದು “ಎಂದು ಹೇಳುವ ಸೆಂಪೆ ಅಲ್ಲಿ ಕೂಡ ಹೆಚ್ಚು ದಿನ ಇರುವುದಿಲ್ಲ.ಸೈನ್ಯ ಸೇರುವಾಗ ದಾಖಲೆಗಳಲ್ಲಿ ಫ್ರಾಡ್ ಮಾಡಿದ್ದನೆಂಬ ಕಾರಣದಿಂದ ಹೊರಹಾಕುತ್ತಾರೆ.
ಅಲ್ಲಿಂದ ಸೆಂಪೆ ಗೆ ಚಿತ್ರಕಲೆಯೇತ್ತ ವಿಪರೀತ ಆಸಕ್ತಿ ಬಂದುಬಿಡುತ್ತದೆ.ಒಂದು ರೀತಿಯ ವ್ಯಂಗಚಿತ್ರಗಳ ಮಂಪರು, ಹುಚ್ಚು ಅವನನ್ನು ಆವರಿಸಿಕೊಂಡು ಬಿಡುತ್ತದೆ.
ಅದೇ ವ್ಯಾಮೋಹದಿಂದ ಅವನು ಪ್ಯಾರಿಸ್ ಗೆ ಬರುತ್ತಾನೆ.ಅಲ್ಲಿ ತಾನು ಬರೆದ ಕಾರ್ಟೂನು ಗಳನ್ನು ಪತ್ರಿಕೆಗಳಿಗೆ ಮಾರಲು ಪ್ರಾರಂಭಿಸುತ್ತಾನೆ.ಮುಂದೆ ಖ್ಯಾತ ವ್ಯಂಗಚಿತ್ರಕಾರ ಗೋಸಿನಿ ಯೊಂದಿಗೆ ‘ನ್ಯೂ ಯಾರ್ಕರ್ ಟೈಮ್ಸ್’ನಲ್ಲಿ ಕಾರ್ಟೂನಿಸ್ಟ್ ಆಗುತ್ತಾನೆ.
ಬಿಳಿ ಹಾಳೆಗಳ ಮೇಲೆ ಒಮ್ಮೆ ರೋಲರ್ ನಂತೆ ,ಒಮ್ಮೆ ಹಾವಿನಂತೆ ಹರಿದಾಡುವ ಸೆಂಪೆಯ ಗೆರೆಗಳಲ್ಲಿ ಅಗೋಚರ ಮಾಂತ್ರಿಕ ಶಕ್ತಿಯ ಮೋಡಿ ಇದೆ.ನಾಜೂಕುತನವಿದೆ.ಜೇಡರ ಬಲೆಯಂಥ ಸೊಗಸುಗಾರಿಕೆ ಇದೆ.ವಿಶಿಷ್ಟ ಶೈಲಿಯ ಗಗನಚುಂಬಿ ಕಟ್ಟಡ ರಸ್ತೆಗಳ ಉದ್ದನೆಯ ಕಾರಿಡಾರ್ ಗಳಲ್ಲಿ ಹಾಸ್ಯದ ಹೊನಲು ಹರಿಸುವ ಸೆಂಪೆ ಯ ಕಾರ್ಟೂನುಗಳ ಖಾಲಿಜಾಗ ಗಳು ,ನೀರಿನಿದ ತೊಳೆದಂತಹ ಪರಿಣಾಮಕಾರಿ ಜಲ ವರ್ಣ ಸಂಯೋಜನೆ ಇವು ಕೇವಲ ಸೆಂ ಪೆ ಮಾರ್ಕಿನ  ಅದ್ಭುತಗಳು.

ಶ್ವಾಸ್’ 2004 ರಲ್ಲಿ ಮರಾಠಿಯಲ್ಲಿ ತೆರೆ ಕಂಡ ಅದ್ಭುತ ಚಿತ್ರ. ಆಸ್ಕರ್ ಗೆ ಎಂಟ್ರಿ ಪಡೆದ ಮೊತ್ತ ಮೊದಲ ಮರಾಠಿ ಚಿತ್ರ ಕೂಡ. 50 ವರ್ಷಗಳ ಹಿಂದೆ ‘ಶ್ಯಾಮ್ ಚಿ ಆಯಿ’ ಚಿತ್ರಕ್ಕೆ ರಾಷ್ಟ್ರದ ‘ಅತ್ಯುತ್ತಮ  ಚಿತ್ರ ಪ್ರಶಸ್ತಿಯನ್ನು ಬಿಟ್ಟರೆ ‘ಶ್ವಾಸ್’ 5 ದಶಕಗಳ ನಂತರ ಪುನಃ ಆ ವೈಭವ ವನ್ನು  ಮರಾಠಿ ಚಿತ್ರ ರಂಗಕ್ಕೆತಂದು ಕೊಟ್ಟಿದೆ. ಜೊತೆಗೆ  32 ಪ್ರಶಸ್ತಿಗಳನ್ನೂ ಪಡೆದು ಮರಾಠಿ ಚಿತ್ರರಂಗದಲ್ಲೇ ದಾಖಲೆ ನಿರ್ಮಿಸಿದೆ.

ತಮಾಷೆ ಎಂದರೆ ಚಿತ್ರದ ನಿರ್ಮಾಪಕರು ವಿಶ್ವನಾಥ್ ರಾಮಕೃಷ್ಣ ನಾಯಕ ಕನ್ನಡಿಗರು.ಮುಂಬೈ ನಲ್ಲಿ ಅವರು ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾಗ ಅವರ ಆಫೀಸ್ ಗೆ  ಮರಾಠಿ ರಂಗ ಭೂಮಿಯ ಖ್ಯಾತ ನಟರು,ನಿರ್ದೇಶಕರೂ ಆಗಿದ್ದ ಅರುಣ್  ನಾಲವಾಡೆ ಒಮ್ಮೆ  ಇನ್ ಕಂ ಟ್ಯಾಕ್ಸ್ ಫೈಲ್ ಮಾಡಲು ಬರುತ್ತಾರೆ.ತುಂಬಾ ಸಹಜವಾಗೇ ರಾಮಕ್ರಿಷ್ಣರಿಂದ  ಸಿನಿಮಾ ಮಾಡಬೇಕೆಂದಿದ್ದ ವಿಷಯ ತಿಳಿಯುತ್ತಿದ್ದಂತೆ ನಾಲವಾಡೆಯವರು ಮರು ದಿನ  ೧೫ ವರ್ಷ ಹಿಂದೆ ನಡೆದಿದ್ದ ವಾಸ್ತವ ಘಟನೆ ಆಧಾರಿತ ಮಾಧವಿ ಘರ್ಪುರೆ ಬರೆದ ಕಥೆ ತರುತ್ತಾರೆ.ನಂತರ ದ ಘಟನೆಗಳು ಸಿನಿಮಾ ಮಾದರಿಯಲ್ಲೇ ಚಕ ಚಕನೆ ನಡೆದು ಹೋಗುತ್ತವೆ,ವಿಶ್ವನಾಥರು ತಮ್ಮಸಮಾನ ಅಭಿರುಚಿಯ  ಸ್ನೇಹಿತರನ್ನು ಚಿತ್ರ ನಿರ್ಮಾಣಕ್ಕೆ ಸೇರಿಸಿಕೊಳ್ಳುತ್ತಾರೆ.ನಿರ್ಮಾಪಕರ ಮಾತಿಗೆ ನಾಲ ವಾಡೆಯವರು ನಿರ್ದೇಶನ ನಿರಾಕರಿಸುತ್ತಾರೆ.ಮತ್ತು ಅವರ ಕಸಿನ್ ಮತ್ತು ಮರಾಠಿ ರಂಗಭೂಮಿಯ ನಟ ನಿರ್ದೇಶಕರಾದ ಸಂದೀಪ್ ಸಾವಂತ್ ರನ್ನು ಸಲಹೆ ಮಾಡುತ್ತಾರೆ.

5

ಚಿತ್ರಕ್ಕೆ’ಶ್ವಾಸ್’ಎಂದು ನಾಮಕರಣವೂ ಆಗುತ್ತದೆ.ಸಂದೀಪರ  ಪೂರ್ಣ ವೃತ್ತಿಪರ ಟೀಂ 31 ದಿನಗಳ  ಶೆಡ್ಯೂಲ್ ನಲ್ಲಿ  ಕೊಂಕಣ್,ರತ್ನಗಿರಿ,ಚಿತ್ರದುರ್ಗ ಗಳಲ್ಲಿ ಚಿತ್ರೀಕರಣ  ಮಾಡುತ್ತಾರೆ.ಆಸ್ಪತ್ರೆಯ ದೃಶ್ಯಗಳನ್ನು ಪುಣೆಯ ಕೆ.ಎಂ  .  ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ್ದರು. ಚಿತ್ರೀಕರಣದ ಒಟ್ಟು ಸಮಯ  6  ತಿಂಗಳು. ಸಿಂಗ್ ಸನ್ ಎಫೆಕ್ಟ್ ಬಳಸಿ ಚಿತ್ರೀಕರಣ  ಮಾಡಿದ್ದರಿಂದ ಪ್ರತ್ಯೇಕ ಡಬ್ಬಿಂಗ್ ಅವಶ್ಯಕತೆ ಇರಲಿಲ್ಲ. 35 ಲಕ್ಷ  ರೂಪಾಯಿಗಳಲ್ಲಿ ಇಡೀ ಸಿನಿಮಾ ಸಿದ್ಧವಾಗಿತ್ತು ನೋಡಿ. ಸಿನಿಮಾ ಏಪ್ರಿಲ್ 9 ಕ್ಕೆ ಬಿಡುಗಡೆಯಾದರೂ ಇಡೀ  ಮಹಾರಾಷ್ಟ್ರದಲ್ಲಿ ಚಿತ್ರಕ್ಕೆ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಬಂದಿರಲಿಲ್ಲ. ಆಗಸ್ಟ್ 14 ಕ್ಕೆ ‘ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿ ಬರುತ್ತಿದ್ದಂತೆ ‘ಶ್ವಾಸ್ ಗೆ ಪ್ರೇಕ್ಷಕರ ಮಹಾಪೂರ.ಇಡೀ ದೇಶದ ತುಂಬಾ ‘ಶ್ವಾಸ್’!ಅಲ್ಲಿಂದ ಬರಿ ಇತಿಹಾಸ ನಿರ್ಮಿಸಿತು.ದೇಶದ 32 ಪ್ರತಿಷ್ಟಿ ತ ಅವಾರ್ಡುಗಳು ಬೆನ್ನಲ್ಲೇ ಬಂದವು.

ಶ್ವಾಸ್’ ಚಿತ್ರದಲ್ಲಿ ಮಹಾರಾಷ್ಟ್ರದ ತೀರ ಹಿಂದುಳಿದ ಗ್ರಾಮದ ಬಾಲಕ ಪರಶುರಾಮ ಹೆಸರಿನ ಪರ್ಶ್ಯಾ ನಿಗೆ ತುಂಬಾ ಅಪರೂಪದ ಕಾಯಿಲೆ Retino blastoma ಹೆಸರಿನ  ಕಣ್ಣಿನ ಕ್ಯಾನ್ಸರ್ ಬಂದಿರುತ್ತದೆ.ಇಲಾಜಿಗೆಂದು ಅವನ ಅಜ್ಜ (ಅರುಣ್ ನಾಲವಾಡೆ )ಮುಂಬೈ ಗೆ ತರುತ್ತಾನೆ.ಮುಂಬೈನ ಆಸ್ಪತ್ರೆಯಲ್ಲಿ ಪರ್ಶ್ಯಾನ ಸಂಬಂದಿ ವೈದ್ಯ ದಿವಾಕರ್, ಅಡ್ಮಿಟ್ ಆದ ನಂತರ ಕೆಲವು ಕಾಗದಗಳಲ್ಲಿ ಶಸ್ತ್ರಚಿಕಿತ್ಸೆಗೂ ಮಗುವಿಗೂ ಯಾವುದೇ ಸಂಬಂಧವಿಲ್ಲವೆಂದು ಸಹಿ ಮಾಡಿಸಿಕೊಳ್ಳುವಾಗ ಇಬ್ಬರೂ ಕಸಿ ವಿಸಿಯಾಗುತ್ತಾರೆ.ಆಸ್ಪತ್ರೆಯಲ್ಲಿನ ವೈದ್ಯಕೀಯ ಸಮಾಜ ಸೇವಕಿ(ಅಮೃತ ಸುಭಾಶ್)ಅಜ್ಜ ಮೊಮ್ಮಗರಿಗೆ ಧೈರ್ಯ ತುಂಬುತ್ತಾಳೆ.ಮಾನಸಿಕ ಸ್ಥೈರ್ಯ ನೀಡುತ್ತಾಳೆ.

ವೈದ್ಯರು ಹೇಳುವ ಪ್ರಕಾರ ಪರ್ಶ್ಯಾ ಜೀವಂತ ಉಳಿಯ ಬೇಕೆಂದರೆ ಅವನ ದೃಷ್ಟಿಯನ್ನು ತೆಗೆಯಲೇ ಬೇಕಾಗುತ್ತದೆ. ಸಂಧಿಗ್ಧದ ಅಜ್ಜ..ಮುಗ್ಧ ಪರ್ಶ್ಯಾ ಇಬ್ಬರನ್ನು ನೋಡುತ್ತಾನಿಂತ ಆ ಹೆಣ್ಣುಮಗಳು ಎಂಥ ಎದೆ ತಟ್ಟುವ ಸ್ಥಿತಿ.ತಕ್ಷಣ ಆ ಹೆಣ್ಣುಮಗಳು ಆ ಇಬ್ಬರಿಗೂ ವಾಸ್ತವ ಹೇಳುವ ಪರಿ ಎಂಥವರನ್ನು ಒಂದು ಕ್ಷಣ ಕಣ್ಣು ಒದ್ದೆ ಮಾಡುತ್ತದೆ.ಕಾರಣಾಂತರದಿಂದ ಶಸ್ತ್ರ ಚಿಕಿತ್ಸೆ ಒಂದು ದಿನ ಮುಂದೂಡಿದಾಗ ಅಜ್ಜನ ಆನಂದ ಕ್ಕೆ ಪಾರವೇ ಇಲ್ಲದಂತಾಗುತ್ತದೆ.ತಕ್ಷಣ ಆತ ಪರ್ಶ್ಯಾನನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಮಾಯವಾಗಿಬಿಡುತ್ತಾನೆ.ಪರ್ಶ್ಯಾ ನಿಗೆ ಶಾಶ್ವತ ತೆರೆ ಬೀಳಲಿರುವ ಬೆಳಕಿನ ನಾಳೆ ಗಳನ್ನು ಇಂದೇ ತೋರಿಸಬೇಕೆಂಬ ಹಠ ಅಜ್ಜನಿಗೆ.ತನ್ನ ಕಣ್ಣ ಜಗತ್ತನ್ನು ಅಜ್ಜ ಪರ್ಶ್ಯಾನಿಗೆ ತೋರಿಸುವ ರೀತಿ ಎಂಥವರನ್ನೂ ಬೆರಗು ಗೊಳಿಸುತ್ತದೆ.ಏಕೆಂದರೆ ಆ ಮಗು ನೋಡುವ ಹಕ್ಕಿ , ಭೂಮಿ,ಮನುಷ್ಯರು,ಸುತ್ತಲಿನ ಜಗತ್ತು ಎಲ್ಲವೂ ಅಂದೇ  ಕೊನೆ. ನಾಳೆಯಿಂದ ಪರ್ಶ್ಯಾ ಕೇವಲ ಧ್ವನಿಯಿಂದ,ಸ್ಪರ್ಶದಿಂದ,ವಾಸನೆಯಿಂದಲೇ ಬದುಕಬೇಕಾಗುತ್ತದೆ ಮತ್ತು ಸಂಬಂಧಗಳನ್ನು ಹುಡುಕಬೇಕಾಗುತ್ತದೆ.

sandeepಕೊನೆಯಲ್ಲಿ ಕಪ್ಪು ಕನ್ನಡಕದ ಪರ್ಶ್ಯಾ ಮತ್ತು ಅಜ್ಜ ದೋಣಿಯೊಂದರಲ್ಲಿ ಇಳಿದು ಊರಕಡೆ ನಡೆಯುತ್ತಾ ತನ್ನ ಜನರನ್ನು ನೋಡುವ ದೃಶ್ಯವಂತೂ ಶ್ವಾಸ್’ಚಿತ್ರಕ್ಕೆ ಅತಂತ ಪರಿಣಾಮಕಾರಿಯಾಗಿದೆ.

ನಿರ್ದೇಶನ:ಸಂದೀಪ್ ಸಾವಂತ್, ನಿರ್ಮಾಪಕರು:ದೇವಿದಾಸ್  ಬಾಪಟ್,ರಾಜನ ಚೆಲ್ಕರ್,ದೀಪಕ್ ಚೌದರಿ,ನರೆಶ್ಚಂದ್ರ  ಜೈನ್,ಅರುಣ್ ನಲವಾಡೆ,ರಾಮಕೃಷ್ಣ, ತಾರಾಗಣ : ನಾಯಕ-  ಮೋಹನ್ ಪರಬ್ ಮತ್ತು ಸಂದೀಪ್ ಸಾವಂತ್, ಸಂಕಲನ:ನೀರಜ್ ವರಾಲಿಯ, ಭಾಷೆ:ಮರಾಠಿ, ಸಮಯ : 107ನಿಮಿಷಗಳು.ಬಿಡುಗಡೆ : ಏಪ್ರಿಲ್-2004, ಸಿನೆಮಾಟೋಗ್ರಫಿ :ಸಂಜಯ್ ಮೆಮಾನೆ, ಕಥೆ: ಮಾಧವಿ ಘರ್ಪುರೆ.

30 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ  ನಡೆದಿದ್ದ ಘಟನೆಯನ್ನು ಆಧರಿಸಿದ ಸಿನಿಮಾ “ಸುಬ್ರಹ್ಮಣ್ಯ ಪುರಂ’.
ತಮಾಷೆಯೆಂದರೆ ಇಲ್ಲಿ ಇಡೀ ಸಿನಿಮಾವನ್ನು 30 ವರ್ಷಗಳ ಹಿಂದಿನ ನೇಪಥ್ಯದಲ್ಲೇ ಮಾಡಿದ್ದಾರೆ. ಈಚಿನ ಸಿನಿಮಾಗಳಲ್ಲಿ 5 ಅಥವಾ 10 ನಿಮಿಷಗಳ,  20-30  ವರ್ಷಗಳ ಹಿಂದಿನ ದೃಶ್ಯಗಳನ್ನು ಕಪ್ಪು ಬಿಳುಪಿನಲ್ಲಿ ತೋರಿಸುತ್ತ ನೇಪಥ್ಯಕ್ಕೆ ಸರಿಯೋದನ್ನು ನೆನಪಿಸಿಕೊಳ್ಳಿ. ಆದರೆ ಇಡೀ ಚಿತ್ರವನ್ನೇ ಆ ನೇಪಥ್ಯದೊಂದಿಗೆ ಮಾಡಿದರೆ..ಆ ಕಾಲದ ಪರಿಸರ, ಉಡುಗೆ ತೊಡುಗೆ, ಸಂಸ್ಕೃತಿ ಇತ್ಯಾದಿಗಳನ್ನು ಯಥಾವತ್ತಾಗಿ ತೋರಿಸುವ ಮೂಲಕ. (ಇಲ್ಲಿ “ಆ ದಿನಗಳು’ ಸಿನಿಮಾ ನೆನಪಿಸಿ ಕೊಳ್ಳಿ..70-80 ರ ದಶಕದ ಬೆಂಗಳೂರಿನ ಭೂಗತ ಲೋಕದ ಹಿನ್ನೆಲೆಯ ಕತೆ..)
“ಸುಬ್ರಹ್ಮಣ್ಯಪುರಂ’ಸಾಧಾರಣ ಮಾರಾಮಾರಿ, ಗ್ರಾಮ ರಾಜಕೀಯದ ದ್ವೇಷ ದಳ್ಳುರಿಗಳ ಹಿನ್ನೆಲೆಯಲ್ಲಿ ತಮ್ಮ ಅಮೂಲ್ಯ ಬದುಕನ್ನು ಮುಗ್ಧವಾಗಿ ನಾಶಮಾಡಿಕೊಳ್ಳುವ ಸ್ನೇಹಿತರ ಕತೆ. ಚಿತ್ರದಲ್ಲಿನ ಆ ಕಾಲದ ಪ್ರೀತಿ, ಪ್ರೇಮ, ಆಕರ್ಷಣೆ, ಪರಿಸರಗಳು ಪ್ರೇಕ್ಷಕನಿಗೆ ಮುದ ಕೊಡುತ್ತವೆ. ಇಲ್ಲಿ ಪರಮ್(ಶಶಿಕುಮಾರ್) ಪಾತ್ರದ ಕಾಣಿಸದ ನಟನೇ ಸಿನಿಮಾದ ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥಾ ಲೇಖಕ.
Subramaniapuram
ಜೈ ಮತ್ತು ಶಶಿಕುಮಾರ್ (ಅಳಗರ್ ಮತ್ತು ಪರಮ್ )ಇಬ್ಬರೂ ನಿರುದ್ಯೋಗಿಗಳು. ಜೀವದ ಗೆಳೆಯರು ಕೂಡ. ಹಾಯಾಗಿ ತಿಂದುಂಡು ಕಾಲ ಕಳೆಯುತ್ತಾ ಸುಬ್ರಹ್ಮಣ್ಯಪುರಂ ಹಳ್ಳಿಯಲ್ಲಿ ತಿರುಗಾಡಿಕೊಂಡಿರುತ್ತಾರೆ.ಊರಿನ ಪುಟ್ಟ ರಾಜಕೀಯ ಪುಢಾರಿಯೊಬ್ಬ ಇವರನ್ನು ತನ್ನ ಕಾನೂನು ಬಾಹಿರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿರುತ್ತಾನೆ. ತಮ್ಮಂಥ ಮೂರು ಜನರನ್ನು ಕಟ್ಟಿ ಕೊಂದು ಆಗಾಗ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ , ಪೊಲೀಸರಿಗೆ ಸಿಕ್ಕಿ ಸ್ಟೇಷನಲ್ಲಿರೋದು, ಪುಢಾರಿಯ ಶಿಫಾರಸ್ಸಿನಿಂದ ಹೊರಬರೋದು..ಅವರ ದಿನಚರಿ.
ಒಂದು ಕೊಲೆಗಾಗಿ ಪುಢಾರಿ ಈ ಗುಂಪಿನ ಮೂವರನ್ನು ಬಳಸಿಕೊಳ್ಳುತ್ತಾನೆ. ಅಳಗರ್, ಪರಮ್ ಮತ್ತು ಕಾಶಿ ಸುಪಾರಿ ಮುಗಿಸಿದ ನಂತರ ನಗುತ್ತಲೇ ಜೈಲಿಗೆ ಹೋಗುತ್ತಾರೆ. ಆದರೆ ತಿರುವು ಇಲ್ಲೇ ಇರೋದು. ಪುಢಾರಿ, ಹುಡುಗರ ಕಡೆ ತಿರುಗಿ ಸಹಿತ ನೋಡುವುದಿಲ್ಲ. ತಣ್ಣಗೆ ತನ್ನ ಪಾಡಿಗೆ ತಾನಿದ್ದು ಬಿಡುತ್ತಾನೆ. ಹುಡುಗರು ಭಯದಿಂದ ಹತಾಶರಾಗುತ್ತಾರೆ. ಏನೂ ತೋಚದು. ಆ ಊರಿನ ಮತ್ತೊಬ್ಬ ಮರಿ ಪುಢಾರಿ ಹುಡುಗರ ಕಡೆ ಆಸಕ್ತಿ ತೋರುತ್ತಾನೆ. ಅವನಿಗೆ ರಾತ್ರಿಯಲ್ಲಿ ಜೈಲಿನ ಹುಡುಗರು ತನ್ನ ಆಯುಧಗಳಾಗಿ ಗೋಚರಿಸುತ್ತಾರೆ. ಮತ್ತು ಅವನಿಗಾಗಿ ಮತ್ತೊಂದು ಭೀಕರ ಕೊಲೆಗೈಯಲು ಸಿದ್ಧರಾಗುತ್ತಾರೆ. ತಾವು ಬದುಕಲ್ಲಿ ನೆಲೆಯೂರಲು ಆರ್ಥಿಕ ಸಹಕಾರ ನೀಡುವನೆಂಬ ಒಂದೇ ಒಂದು ಕಾರಣದಿಂದ ಮುಗ್ಧರಾಗಿ ಆತ ಹೇಳಿದ್ದಕ್ಕೆಲ್ಲ ಒಪ್ಪುತ್ತಾರೆ. ಇಲ್ಲೂ ಅವನ ಮೋಸದ ಮತ್ತೊಂದು ಮುಖದ ಕರಾಳತೆ ಹುಡುಗರನ್ನು ಬೆಚ್ಚಿ ಬೀಳಿಸುತ್ತದೆ. ಈ ಅಮಾನುಷತೆಗೆ ತೆರೆ ಎಳೆಯಲು ಅವರು ಪುಢಾರಿಯ ತಮ್ಮನನ್ನೇ ಕೊಲೆಮಾಡಲು ಸಂಚು ಹೂಡುತ್ತಾರೆ. ಊಹಿಸಲಸಾಧ್ಯವಾದ ತಿರುವುಗಳಿವು.
ಪೋಲಿಗೆಳೆಯರ ಸಣ್ಣಪುಟ್ಟ ಕಳ್ಳತನಗಳು, ಯಾರಿಗಾಗಿಯೋ ಮಾಡುವ ಬರ್ಬರ ಕೊಲೆಗಳ ಮಧ್ಯೆ ಬೆಳದಿಂಗಳಂಥ ಪ್ರೇಮ ಕಥೆಯೊಂದು ನಡೆಯುತ್ತದೆ. ಪುಢಾರಿಯ ಮಗಳು  ನೈದಿಲೆಯಂಥ ಚೆಂದದ ಬೆಡಗಿ ತುಳಸಿ ಜೈ ಅನ್ನು ಪ್ರೀತಿಸುವ ಪರಿ, ಮತ್ತು ಅದರ ವಿಲಕ್ಷಣ ಅಂತ್ಯ ಚಿತ್ರದ ಮುಖ್ಯ ಘಟ್ಟಗಳಾಗಿ ಕಾಡುತ್ತವೆ. ತುಳಸಿಯಾಗಿ ಸ್ವಾತಿಯದು ಅದ್ಭುತ ನಟನೆ.
ತುಳಸಿಯ ಮುಗ್ಧ ಪ್ರೀತಿ, ಆಕರ್ಷಣೆ ಆಕೆಯ ಬೊಗಸೆ ಕಂಗಳು, ಕಳೆದು ಹೋದ ಬಾಲ್ಯದ ಗೆಳತಿಯಂತೆ, ಲಂಗ  ದಾವಣಿಯಲ್ಲಿ ಅಪ್ಪಟ ಮಣ್ಣಿನ ನೆಲದ ಹುಡುಗಿಯಾಗಿ ಗಮನ ಸೆಳೆಯುತ್ತಾಳೆ. ಸಿನಿಮಾದಲ್ಲಿ ಪ್ರೀತಿ ಕುರಿತಂತೆ ಎಲ್ಲೂ  ಪುಟಗಟ್ಟಲೆ ಗಂಟೆಗಟ್ಟಲೆ ಭಾಷಣಗಳಿಲ್ಲ. ಮನೆಯವರ ಎಮೋಶನಲ್ ಬ್ಲಾಕ್‌ಮೇಲ್ ಗೆ ಸ್ವಾತಿಯ ಸಂಯಮ ನಟನೆ ಬೆರಗುಗೊಳಿಸುತ್ತದೆ. ಪರಮ್ ಪಾತ್ರದಲ್ಲಿ ಶಶಿಕುಮಾರ್ ,ಕಾಶಿ ಪಾತ್ರದಲ್ಲಿ ಗಾಂಜಾಕುರುಪ್ಪು ಇಷ್ಟವಾಗುತ್ತಾರೆ.
Untitled-1 copy
ಜೇಮ್ಸ್ ವಸಂತನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.  ಎಸ್.ಆರ್.ಕಥಿರ್ ರ ಸಿನಿಮಾಟೋಗ್ರಫಿ ಆಹ್ಲಾದಕರ.  ಚಿತ್ರದ ಪ್ರತಿ ಫ್ರೇಮ್ 1960 ರ ಪರಿಸರಗಳನ್ನು ಗಾಢವಾಗಿ  ನೆನಪಿಸುತ್ತದೆ. ಆ ಸಮಯದ ಉದ್ದ ಹಿಪ್ಪಿ ಮಾದರಿಯ ಕೇಶ  ವಿನ್ಯಾಸ, ದಟ್ಟ ಬಣ್ಣಗಳ ಬೆಲ್ ಬಾಟಂ ಪ್ಯಾಂಟುಗಳು,  ಬಿಗಿಯಾದ ದೊಡ್ಡ ಕಾಲರಿನ ಹೂಗಳ, ಚೆಕ್ಸ್ ಶರಟುಗಳು,  ಆಗಾಗ ಹಾದು ಹೋಗುವ ಅಂಬಾಸಿಡರ್ ಕಾರುಗಳು,  ಹಳೆಯ  ಮನೆಗಳು, ಬಸ್ಸುಗಳು, ಕರೆನ್ಸಿ ನೋಟುಗಳು, ನೇಪಥ್ಯದ ರೇಡಿಯೋ ಹಾಡುಗಳು ನಮ್ಮನ್ನು ಮೂವತ್ತು ವರ್ಷಗಳ ಹಿಂದಕ್ಕೆ ಕರೆದೊಯ್ಯುವುದು ಖಚಿತ.
ಕೊನೆಯಲ್ಲಿ ನಾಯಕನನ್ನು ಅವನ ಜೀವದ ಗೆಳೆಯ ನಂಬಿಕೆ ದ್ರೋಹದಿಂದ ಕೊಲೆ ಮಾಡಿಸಿದ ಮೇಲೆ ಅವನು ಬೂತಿನಿಂದ ಹಾಲು, ತರಕಾರಿ ತರುವಷ್ಟೇ ಸಹಜವಾಗಿ ನಿರ್ಲಿಪ್ತವಾಗಿ ಕೆರೆಯ ದಡದ ಮೇಲೆ ನಡೆದು ಬರುವ ಸಿಂಗಲ್ ಶಾಟ್ ದೃಶ್ಯವಂತೂ ಇಡೀ ಚಿತ್ರಕ್ಕೆ ಮುಕುಟ ಪ್ರಾಯ. ಚಿತ್ರದ ಸೂತ್ರಧಾರ ಶಶಿಕುಮಾರ್‌ನ ಪ್ರತಿಭೆಯ ಬಗ್ಗೆ ಹೆಮ್ಮೆಯಾಗುತ್ತದೆ. ಚಿತ್ರದಲ್ಲಿ ಕೆಲ ಬರ್ಬರ ಕೊಲೆಗಳು ಜಿಗುಪ್ಸೆ ಮೂಡಿಸಿದರೂ ಒಟ್ಟಾರೆ ಚಿತ್ರ ಹೊಸ ಅನುಭವ ನೀಡುತ್ತದೆ.
ಚಿತ್ರ : ಸುಬ್ರಹ್ಮಣ್ಯ ಪುರಂ, ನಿರ್ದೇಶನ, ನಿರ್ಮಾಣ ಮತ್ತು ಸ್ಕ್ರೀನ್ ಪ್ಲೇ  :ಶಶಿಕುಮಾರ್, ತಾರಾಗಣ:ಜೈ,ಶಶಿಕುಮಾರ್,ಸ್ವಾತಿ, ಗಾಂಜಾ ಕುರುಪ್ಪು, ಸಮುದ್ರ ಕನಿ. ಸಂಗೀತ:ಜೇಮ್ಸ್ ವಸಂತನ್. ಛಾಯಾಗ್ರಹಣ :ಎಸ್.ಆರ್.ಕಥಿರ್, ಬಿಡುಗಡೆ:2008, ಸಮಯ: 160 ನಿಮಿಷ, ಭಾಷೆ:ತಮಿಳು

“ದೇದೆ ಖುದಾಕೆ ನಾಮ್ ಪೆ
ಪ್ಯಾರೆ ,ತಾಕತ್ ಹೈ ಗರ್ ದೆನೆ ಕಿ
ಕುಚ್ ಚಾಹೆ ಅಗರ್ ತೋ ಮಾಂಗ್ ಲೇ
ಮುಜ್ಹ್ ಸೆ ಹಿಮ್ಮತ್ ಹೋ ಗರ್ ಲೇನೇ ಕಿ”

(ನಿನಗೆ ಕೊಡುವ ಶಕ್ತಿ ಇದ್ದರೆ ದೇವರ ಹೆಸರಮೇಲೆ ಕೊಡು,ನಿನಗೆ ಏನಾದರೂ ಕೇಳ ಬೇಕೆಂದಿದ್ದರೆ ಅದನ್ನು ಕೂಡ ಕೇಳು )

ವಾಸಿರ್ ಮಹಮ್ಮದ್ ಖಾನ್ ಬರೆದ 1931 ಮಾರ್ಚ್ 13 ರಂದು ಬಿಡುಗಡೆಯಾದ  ದೇಶದ ಮೊತ್ತ ಮೊದಲ ಟಾಕಿ ಚಿತ್ರ ‘ಆಲಂ ಆರಾ’ ಚಿತ್ರದ ಜನಪ್ರಿಯ ಹಾಡಿನ ಸಾಲಿದು. ಮೊದಲ ಮೂಕಿ ಚಿತ್ರ ‘ರಾಜಾ ಹರಿಶ್ಚಂದ್ರ ‘ ಮಹಾಭಾರತದ ಹಿನ್ನೆಲೆಯ ಕಥೆ ಆಧಾರಿತವಾಗಿದ್ದರೆ ‘ಆಲಂ ಆರಾ’ ಮಾತ್ರ ಪಾರ್ಸಿ ನಾಟಕ ಮತ್ತು ಜಾನಪದ ಕಥಾವಸ್ತು ಹೊಂದಿದ್ದ ಚಿತ್ರ.

master_vithal_and_zubeida_in_alam_ara2c_1931

 ಇಬ್ಬರ ಹೆಂಡಿರ ಮುದ್ದಿನ ವೃದ್ಧ ರಾಜನೊಬ್ಬನಿಗೆ  ಪುತ್ರಸಂತಾನವಿರಲಿಲ್ಲ.ರಾಣಿಯರಿಬ್ಬರೂ ಮೊದಲು ಮಗನನ್ನು  ಹೆತ್ತು ರಾಜನನ್ನು ಆಶ್ಚರ್ಯ ಗೊಳಿಸಲು ಯೋಚಿಸುತ್ತಾರೆ.

 ಆದರೆ ಇಬ್ಬರು ರಾಣಿಯರಲ್ಲಿ ಒಬ್ಬರಿಗೆ ಮಾತ್ರ ಆ  ಅದೃಷ್ಟವಿದೆಯೆಂದು ಫಕೀರನೊಬ್ಬ ಹೇಳಿರುತ್ತಾನೆ. ಎರಡನೆಯ  ರಾಣಿ ಸೈನ್ಯಾಧಿಕಾರಿಯ ಸ್ನೇಹ ಸಂಪಾದಿಸಿ ತನಗೆ ದಕ್ಕದ  ಅದೃಷ್ಟ ಮತ್ತ್ಯಾರಿಗೂ ದಕ್ಕಬಾರದೆಂದು ದುರಾಸೆಯಿಂದ ರಾಜನ  ಕುಟುಂಬವನ್ನು ಸರ್ವನಾಶ ಮಾಡಲು ಪಣ ತೊಡುತ್ತಾಳೆ.
 ಆದರೆ ಸೈನ್ಯಾಧಿಕಾರಿಯ ಪ್ರಾಮಾಣಿಕತೆ ಆಕೆಗೆ ಕುತ್ತಾಗುತ್ತದೆ.  ಹಗೆ ತೊಟ್ಟ ಹೆಣ್ಣು ತನಗೆ ಸಹಕರಿಸದ ಸೈನ್ಯಾಧಿಕಾರಿಯ  ಇಡೀ  ಕುಟುಂಬವನ್ನು ನಿರ್ನಾಮ ಮಾಡುತ್ತಾಳೆ.

 ಆದರೆ ಹೇಗಿದ್ದರೂ ಅದು ಸಿನಿಮಾ ತಾನೆ? ಸೈನ್ಯಾಧಿಕಾರಿಯ  ಚೆಲುವಿ ಮಗಳು ಹೇಗೋ ತಪ್ಪಿಸಿಕೊಲ್ಲುತ್ತಾಳೆ . ಆ ಚೆಲುವೆ (ಜುಬೇದಾ) ಕಾಡಲ್ಲಿ ಬೆಳೆಯುತ್ತಾಳೆ. ಹುಡುಗಿ ‘ಆಲಂ ಆರಾ(ಜಗತ್ತಿನ ರೂಪಸಿ)’. ಆಲಂ ಆರಾ ಮುಂದೆ ಕಾಡಿನ ತನ್ನ ಜನರೊಂದಿಗೆ ಅರಮನೆ ಮೇಲೆ ದಂಡೆತ್ತಿ ಬರುತ್ತಾಳೆ. ಮೋಸಗರ್ತಿ ರಾಣಿಯ ನಿಜ ಸ್ವರೂಪವನ್ನು ಬಯಲು ಮಾಡುತ್ತಾಳೆ. ಆಗಾಗಲೇ ಯುಕ್ತ ವಯಸ್ಸಿಗೆ ಬಂದಿದ್ದ ರಾಜಕುಮಾರ (ಮಾಸ್ಟರ್ ವಿಠಲ್) ಆಲಂ ಆರಾ ಳನ್ನು ವರಿಸುತ್ತಾನೆ. ಶುಭಂ! ಇದು ಕಥೆ.

ಇಲ್ಲಿ ಪಾರ್ಸಿ ನಾಟಕ ಕೂಡ ರೋಡ್ಗರ್ಸ್ ಮತ್ತು ಹ್ಯಾಮ್ಮರ್ ಸ್ಟೀನ್ ರ ಯುನಿವರ್ಸಲ್ ಪಿಚ್ಚರ್ಸ್ ನಿರ್ಮಾಣದ ‘ಷೋ ಬೋಟ್’ ಎಂಬ ಹಾಲಿವುಡ್ ಸಿನೀಮಾದಿಂದ ಕೂಡ ‘ಆಲಂ ಆರಾ ‘ಪ್ರೇರಣೆ ಗೊಂದು ನಿರ್ಮಾಣವಾಗಿತ್ತು.

ಅರ್ದೇಷೆರ್ ಇರಾನಿ ನಿರ್ದೇಶಿಸಿದ್ದ ,ಇಂಪೀರಿಯಲ್ ಮೂವಿ ಟೋನ್;ಸಂಸ್ಥೆ ನಿರ್ಮಿಸಿದ್ದ ಈ ಚಿತ್ರ ಮುಂಬೈ ನ ಅವರದ್ದೇ ಟಾಕಿಸ್ ಮೆಜೆಸ್ಟಿಕ್ ನಲ್ಲಿ ಬಿಡುಗಡೆಯಾಗಿ ಜನರನ್ನು ಹುಚ್ಚು ಹಿಡಿಸಿತ್ತು.ಪ್ರತಿದಿನ ಪ್ರವಾಹದಂತೆ ಜನ ಚಿತ್ರ ನೋಡಲು ಬರುತ್ತಿದ್ದರು.ನಾಲ್ಕಾಣೆಯ ಸಿನಿಮಾ ಟಿಕೆಟ್ಸ್ 4-5 ರೂಪಾಯಿಗಳಿಗೆ ಬ್ಲಾಕ್ ನಲ್ಲಿ ಮಾರುತ್ತಿದ್ದರು.

ಚಿತ್ರದ ಆ ಕಾಲದ ಪೋಸ್ಟರ್ ಚಿತ್ರದ ಆ ಕಾಲದ ಪೋಸ್ಟರ್ 

7 ಮಧುರವಾದ ಹಾಡುಗಳನ್ನು ಹೊಂದಿದ್ದ ‘ಆಲಂ ಆರಾ’ ಚಿತ್ರಕ್ಕೆ ಫಿರೋಜ್ ಶಹ ಮಿಸ್ತ್ರಿ ,ಬಿ. ಇರಾನಿ ಅದ್ಭುತವಾದ ಸಂಗೀತವನ್ನು ಸಂಯೋಜಿಸಿದ್ದರು. ವಿಲ್ಫೋರ್ದ್ ದೆಮಿಂಗ್  ಹಾಗೂ ಆದಿ.ಎಂ .ಇರಾನಿ ಸಿನಿಮಾಟೋಗ್ರಾಫರ್ಸ್ ಆಗಿದ್ದರು. ಸಿನಿಮಾ ಪೋಸ್ಟರ್ ನಲ್ಲಿ  ‘All living, Breathing 100% talking’ ಎಂದು ಬರೆದಿದ್ದರು.

ಅರ್ದೆಷೆರ್ ಇರಾನಿ ಭಾರತಿಯ ಶಬ್ದ ಚಿತ್ರದ ಬ್ರಹ್ಮ!

ಇಡೀ ದೇಶದಿಂದ ‘ಆಲಂ ಆರಾ’ ಸಿನಿಮಾಗಾಗಿ ಬೇಡಿಕೆ ಬರತೊಡಗಿದಾಗ ಸೌಂಡ್ ಪ್ರೋಜಕ್ಟಾರ್ ದೊಂದಿಗೆ ನಿರ್ದೇಶಕರು ತಿರುಗಾಟಕ್ಕೆ ಸಿದ್ಧವಾಗೇ ಬಿಟ್ಟರು. ಸೌಂಡ್ ಆಪರೇಟರ್ ಆಗಿದ್ದ ಟಿ.ಮಹದೇವ್ ಹೇಳುತ್ತಾರೆ. ‘ಚೆನ್ನೈ ನ ಸೆಂಟ್ರಲ್ ಸ್ಟೇಷನ್ ನಲ್ಲಿ ನಾವು ಇಳಿಯುತ್ತಿದ್ದಂತೆಯೇ ಸೆಂಟ್ರಲ್ ಥಿಯೇಟರ್ ಮಾಲೀಕರು ಹೂವಿನ ಹಾರಗಳೊಂದಿಗೆ ಸ್ವಾಗತಿಸಿದ್ದರು. ತಿರುಚ್ಚಿಯಲ್ಲಿ ಸಿನಿಮಾ ಯುನಿಟ್ ಗಾಗಿ ರೈಲು ಒಂದು ತಾಸು ತಡವಾಗಿ ಹೊರಟಿತ್ತು.

ತುಮಕೂರಿನಲ್ಲಾದರೆ ಇಡೀ ಸಿನೀಮಾ ಯುನಿಟ್ ಯಾವುದೇ ಹೋಟೆಲ್ ನಲ್ಲಿ ತಿಂಡಿ ,ಊಟ ಉಚಿತವಾಗಿ ಮಾಡಬಹುದೆಂದು ಘೋಷಿಸಿದ್ದರು.
 
‘ಆಲಂ ಆರಾ’  ಸಿಂಗಲ್ ಪ್ರೋಸೆಸ್ಸ್ ನಲ್ಲಿ ತಯಾರಾದ ಸಿನಿಮಾ.ಅಂದರೆ ಪಿಚ್ಚರ್ ನೆಗೆಟಿವ್ ಗೆ ಶಬ್ದವನ್ನು ಸೇರಿಸುವದು.(ಆಗಿನ್ನೂ play back ಪದ್ದತಿ ಇರಲಿಲ್ಲ.) ಚಿತ್ರೀಕರಣ ದಲ್ಲೇ ಧ್ವನಿಗ್ರಹಣ ನಡೆಯುತ್ತಿತ್ತು.೪ ತಿಂಗಳ ಸಮಯದಲ್ಲಿ ತಯಾರಾಗಿದ್ದ ಈ ಸಿನಿಮಾದ ಬಜೆಟ್ ಬರೀ 4000 ರೂಪಾಯಿಗಳು. 10, 500 ಅಡಿಗಳಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರ ಅಪ್ಪಟ ಸ್ವದೇಶಿ ಚಿತ್ರ.

ಚಿತ್ರ : ಆಲಂ ಅರಾ, ಭಾಷೆ : ಹಿಂದಿ, ಸಮಯ : 124 ನಿಮಿಷ, ನಿರ್ದೇಶಕ : ಅರ್ದೇಷೆರ್ ಇರಾನಿ 

ಅರ್ಧಸತ್ಯ’- ಭಾರತೀಯ ಚಿತ್ರರಂಗದಲ್ಲೇ ಒಂದು ರೀತಿಯಲ್ಲಿ ಟ್ರೆಂಡ್ ಸೆಟ್ಟರ್ ಸಿನಿಮಾ. ಗೋವಿಂದ ನಿಹಲಾನಿಯವರು ನಿರ್ದೇಶಿಸಿದ ಸಿನಿಮಾ ಸಾಮಾನ್ಯರ ಬದುಕಿನಲ್ಲೊಂದು ತಮ್ಮ ನಡುವೆಯೇ ಇರುವ, ಭ್ರಷ್ಟ ಸರಕಾರಿ ವ್ಯವಸ್ಥೆಯೊಳಗೆ ನಲುಗುವ ಮತ್ತೊಬ್ಬ ವ್ಯಕ್ತಿಯ ಒಳದನಿ ಕೇಳಿಸಿದ ಚಿತ್ರ.

ಸತ್ಯಕ್ಕೂ ಅಸತ್ಯಕ್ಕೂ ನಡುವಿನ ದೂರ ಎಷ್ಟು ?

ಆದರ್ಶಕ್ಕೂ ವಾಸ್ತವಕ್ಕೂ ನಡುವಿನ ಅಂತರವೆಷ್ಟು ? ಈ ಪ್ರಶ್ನೆಗಳಿಗೆ ಇವತ್ತಿಗೂ ಸರಿಯಾದ ಉತ್ತರವಿಲ್ಲ. ಪರಿಸ್ಥಿತಿಗಳೊಂದಿಗೆ, ವ್ಯವಸ್ಥೆಯೊಂದಿಗೆ  ರಾಜಿಯ ಉತ್ತರಗಳನ್ನು  ಹುಡುಕಿಕೊಳ್ಳುತ್ತಿದ್ದಾರೆ. ಆ ಉತ್ತರ ಇಲ್ಲಿ’ಅರ್ಧ ಸತ್ಯ’ವಾಗಿರುತ್ತದೆ.ನಿಷ್ಟುರವಾದ ಸತ್ಯವನ್ನೇ  ಗೋವಿಂದ ನಿಹಲಾನಿ ‘ಅರ್ಧ ಸತ್ಯ’(1983) ಹೆಸರಿಂದ  ಸಿನಿಮಾ ಮಾಡಿದ್ದಾರೆ. ನಿರ್ದೇಶಕರಾಗಿ ಅವರಿಗೆ ಈ ಚಿತ್ರ ಮೈಲಿಗಲ್ಲು.

ardh_satya

ಸಿನಿಮಾದಲ್ಲಿ ನಾಯಕನಾಗಿ  ನಟಿಸಿದ ಓಂಪುರಿಗೂ ಇದು  ಕಂಡರಿಯದ ಮೊದಲ ಹಿಟ್.  ಒಂದು ಕಲಾತ್ಮಕ ಚಿತ್ರ  ಕಮರ್ಷಿಯಲ್ ಆಗಿ  ಜನಪ್ರಿಯಗೊಳ್ಳುವ ಟ್ರೆಂಡ್  ಇದರಿಂದಲೇ ಪ್ರಾರಂಭವಾಯ್ತು.  ಆದ್ದರಿಂದಲೇ ‘ಅರ್ಧ ಸತ್ಯ’  ಭಾರತಿಯ ಚಿತ್ರ ಇತಿಹಾಸದಲ್ಲೂ  ಮೈಲಿಗಲ್ಲೇ.

ನಮ್ಮ ಚಲನಚಿತ್ರ ಇತಿಹಾಸದ  ಪುಟಗಳನ್ನು ತಿರುವಿ ನೋಡಿದರೆ ಪೋಲಿಸ್ ಕಥೆಯಾಧಾರಿತ ಸಿನಿಮಾಗಳು ಪುಂಖಾನು ಪುಂಖವಾಗಿ ಸಿಗುತ್ತವೆ. ವೃತ್ತಿಯನ್ನು ಪವಿತ್ರವೆಂದು ಭಾವಿಸುತ್ತಾ ತಮ್ಮ ಪ್ರಾಣವನ್ನೇ ಧಾರೆಯೆರೆದ ನಿಷ್ಟಾವಂತ ಪೋಲಿಸ್ ಅಧಿಕಾರಿಗಳು ಒಂದು ಕಡೆಯಾದರೆ, ಲಂಚ-ಅಧಿಕಾರ ಧಿಮಾಕುಗಳಿಂದ ಮೆರೆದವರ ದಂಡು ಮತ್ತೊಂದು ಕಡೆ. ನಿಜ ಹೇಳಬೇಕೆಂದರೆ ಪೋಲಿಸ್ ಉದ್ಯೋಗ ಒಂದು ರೀತಿಯಲ್ಲಿ ಕತ್ತಿಯಂಚಿನ ಬದುಕು. ನಿಷ್ಠೆ ಪ್ರಾಮಾಣಿಕತೆಗಳು ಮೇಲಧಿಕಾರಿಗಳ ಲೋಲುಪತೆ ಎದುರು ಕೇವಲ ನಿಘಂಟಿನ ಪದಗಳು. ವೃತ್ತಿಗೆ ನ್ಯಾಯ ಒದಗಿಸಲಾಗದೆ, ಮನಸ್ಸಿಗೆ ವಿರುದ್ಧವಾಗಿ ಪರಿಸ್ಥಿತಿಗಳೊಂದಿಗೆ ರಾಜಿಯಾಗದೆ ಮಾನಸಿಕವಾಗಿ ಜರ್ಜರಿತರಾಗುತ್ತಿರುವ ಎಷ್ಟೋ ನಿಷ್ಠಾವಂತ ಅಧಿಕಾರಿಗಳಿದ್ದಾರೆ. ಜೈಲಿನ ಗೋಡೆಗಳ ಹಿಂದೆ, ಬಾಗಿಲ ಸರಳುಗಳ ಹಿಂದೆ ಕಮರಿ ಹೋಗುತ್ತಿರುವ ಖೈದಿಗಳಂತೆ ಜೈಲು ಗೋಡೆಗಳ ಈಚೆ ಇಂಥದೇ ಸ್ಥಿತಿಯಲ್ಲಿರುವ ಪೋಲೀಸರ ದುರ್ಭರ ಸ್ಥಿತಿಗಳ ಬಗ್ಗೆ ನಿಹಲಾನಿ ಸಿನಿಮಾ ಮಾಡುವವರೆಗೆ ಯಾರಿಗೂ ಗೊತ್ತಿರಲಿಲ್ಲ.

ardhy-satya-11

‘ಅರ್ಧ ಸತ್ಯ’ ಪ್ರಾಮಾಣಿಕ ಪೋಲಿಸ್ ಇನ್ಸಪೆಕ್ಟರ್ ಒಬ್ಬನ  ಕಥೆ.  ಅನಂತ್ ವೇಲಂಕರ್(ಓಂ ಪುರಿ) ಸೂಕ್ಷ್ಮ ಮನಸ್ಸಿನ ಕವಿ  ಹೃದಯದ, ಭಾವುಕ. ಆರ್ಟ್ಸ್‌ನಲ್ಲಿ ಪ್ರೊಫೆಸರ್ ಆಗಬೇಕೆಂಬ  ಮಹತ್ವಾಕಾಂಕ್ಷೆಯವ. ಆದರೆ ಅವನ ತಂದೆಯ(ಅಮರೀಶ್  ಪುರಿ) ಯೋಚನೆಗಳೇ ಬೇರೆ .ಬೀದಿಯ ರೌಡಿಗಳನ್ನು ಒದ್ದು  ದಾರಿಗೆ ತರುವಂತೆ ಹೆಂಡತಿಯನ್ನು ಕೂಡ ಒದ್ದು ದಾರಿಗೆ  ತರುವಲ್ಲಿ ತಪ್ಪೇನೂ ಇಲ್ಲವೆಂದು ಭಾವಿಸುವ ಹುಂಬ ಮನುಷ್ಯ.  ಅವನಿಗೆ ಎದುರಿನವರ ಇಷ್ಟಗಳ, ಆಸೆಗಳ ಪ್ರಮೇಯವೇ ಇಲ್ಲದವನಂತೆ ವರ್ತಿಸುವವ. ಎಲ್ಲ ತನ್ನಿಷ್ಟ.  ತಾನು ಅಂದು ಕೊಂಡದ್ದು ನೆರವೇರಿದರೆ ಸಾಕು. ಹಾಗೆಯೇ ಮಗ ಅನಂತನ ಪುಟ್ಟ ಪುಟ್ಟ ಆಸೆಗಳನ್ನು, ಬಯಕೆಗಳನ್ನು ನಿರ್ಲಕ್ಷ್ಯಿಸಿ, ನಿರಾಕರಿಸಿ ಪೋಲಿಸ್ ವೃತ್ತಿಯಲ್ಲಿ ಸೇರುವಂತೆ ಮಾಡಿದ.

ಇಷ್ಟ ಕಷ್ಟ ಗಳ ನಡುವೆ ಅನಂತ್ ಉದ್ಯೋಗಕ್ಕೆ ಸೇರಿದ ಬಳಿಕ ಅನ್ನ ಕೊಡುವ ಉದ್ಯೋಗ ಕ್ಕೆ ಪ್ರಾಮಾಣಿಕನಾಗಿರುತ್ತಾನೆ. ಹಾಗೆ ಇರಬೇಕಾಗಿರುವುದು ತನ್ನ ಕರ್ತವ್ಯವೆಂದೇ ಭಾವಿಸಿರುತ್ತಾನೆ. ಒಮ್ಮೆ ಅಲ್ಲಿ ಸ್ಥಳೀಯ ರೌಡಿ ರಾಮ್ ಶೆಟ್ಟಿ(ಸದಾಶಿವ್ ಅಮರಾಪುರಕರ್) ಹೆಸರಿನ ರೌಡಿಯನ್ನು  ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಪೋಲಿಸ್ ಪೇದೆಯೊಬ್ಬನನ್ನು ರೌಡಿಗಳು ಥಳಿಸಿದ ಆರೋಪದ ಮೇಲೆ ರಾಮ್ ಶೆಟ್ಟಿ ಯ ಮೂವರು ಅನುಚರರನ್ನು ಅನಂತ್ ಬಂಧಿಸುತ್ತಾನೆ. ಆದರೆ ರಾಮ್‌ಶೆಟ್ಟಿಗೆ  ಅನಂತ್‌ನ ಮುಗ್ಧತೆ ನಗು ತರಿಸುತ್ತದೆ. ಆತ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಕ್ಷಣಗಳಲ್ಲಿ ಅವರ ಬಿಡುಗಡೆಯ ಆರ್ಡರ್ ಹೊರಡಿಸುತ್ತಾನೆ. ಇದೆಲ್ಲ ಅನಂತ್ ನ ಕಣ್ಣ ಮುಂದೆಯೇ ನಡೆಯುತ್ತದೆ. ಅನಂತನಿಗೆ ತನ್ನ ನಿಸ್ಸಹಾಯಕತೆ, ತನ್ನ ಇತಿ ಮಿತಿಗಳ ಕಲ್ಪನೆ ಸ್ಪಷ್ಟವಾಗುತ್ತದೆ. ಹತಾಶೆಯಿಂದ ಇದನ್ನು ತನ್ನಪೋಲಿಸ್  ಸ್ನೇಹಿತರೊಂದಿಗೆ ಹಂಚಿ ಕೊಳ್ಳಲು ಯತ್ನಿಸುತ್ತಾನೆ.

ಆದರೆ ಅನಂತನ ಸ್ನೇಹಿತರದೊಂದು ಕಥೆ. ಉದ್ಯೋಗದಲ್ಲಿ ಸೇರಿದ ಹೊಸದರಲ್ಲಿ ಅವರೂ ಈ ರೀತಿಯ ಆದರ್ಶ ಬದುಕಿಗಾಗಿ ಪಣ ತೊಟ್ಟವರೇ ! ಸುತ್ತಲಿನ ವ್ಯವಸ್ಥೆ ಯ ಪ್ರವಾಹದ ಎದುರು ಈಜಲಾಗದೇ ರಾಜಿಯಾದ ಮತ್ತೊಬ್ಬ ಇನ್ಸ್ಸ್‌ಪೆಕ್ಟರ್ ಹೈದರಾಲಿ(ಶಫಿ ಇನಾಮದಾರ) ಮತ್ತು ವ್ಯವಸ್ಥೆ ಯೊಂದಿಗೆ ಹೋರಾಡುತ್ತಲೇ ಜೀವಚ್ಚವವಾಗಿ ಬದುಕುತ್ತಿರುವ ಇನ್ನೊಬ್ಬ ಇನ್ಸ್ಸ್‌ಪೆಕ್ಟರ್ ಮೈಕ್ ಲೋಬೋ(ನಾಸಿರುದ್ದೀನ್ ಷಾ ) ರನ್ನು ಕಂಡು ಭಯವಾಗುತ್ತದೆ.

ಅನಂತ್ ಎದುರಿಗೆ ಎರಡೇ ದಾರಿ. ಒಂದು ರಾಜಿಯಾಗಿ ನೈತಿಕವಾಗಿ ಪತನ ಹೊಂದುವುದು, ಮತ್ತೊಂದು ರಾಜಿಯಾಗದೆ ಜೀವಚ್ಚವವಾಗಿ ಬದುಕುವುದು. ಈ ಮಧ್ಯೆ ನಲುಗುವ ಅನಂತ್ ತನ್ನ ದಾರಿಯನ್ನು ನಿರ್ಧರಿಸಲಾಗದೇ ಮದ್ಯದ ಮೊರೆ ಹೋಗುತ್ತಾನೆ. ಕ್ರಮೇಣ ಮದ್ಯ ವ್ಯಸನಿಯಾಗುತ್ತಾನೆ. ತನ್ನ ಬಗ್ಗೆ ಅತೀವ ಪ್ರೀತಿ ತೋರುವ ಕವಿತೆಯೆಂಥ ಚೆಂದನೆಯ ಹುಡುಗಿ ಜ್ಯೋತ್ಸ್ನಾಳನ್ನು ಅನಂತ್ ಹಿಂಸಿಸಲು ಪ್ರಾರಂಭಿಸುತ್ತಾನೆ. ಒಮ್ಮೆಯಂತೂ ಜ್ಯೋತ್ಸ್ನಾಳೊಂದಿಗೆ ಮಾತಾಡಲೇ ಬೇಕೆಂಬ ಉತ್ಕಟತೆಯಿಂದ ಫೋನ್ ಮಾಡಿದಾಗ “ನಾನೇ ಮಾತಾಡ್ತಿರೋದು’ ಎಂದು ಪದೇ ಪದೇ ಹೇಳಿದರೂ “ಆಕೆಗೆ ಫೋನ್ ಕೊಡಿ’ಎಂದು ಕೇಳುವಾಗಿನ ಅನಂತ್ ಮನಸ್ಥಿತಿ ಹೇಗಿರಬಹುದು ಊಹಿಸಿ. ಆ ಸಮಯದಲ್ಲಿ ಜ್ಯೋತ್ಸ್ನಾ “ಈಗ ಅವರು ಮನೇಲಿಲ್ಲ. ಬಂದ ನಂತರ ಹೇಳ್ತೇನೆ’ ಎಂದಾಗಲೇ ಅನಂತ್‌ಗೆ  ಸಮಾಧಾನ.

ತನ್ನನ್ನು ತಾನು ಅಂದಾಜಿಸಲಾಗದ ವಿಚಿತ್ರ ಸ್ಥಿತಿಯಲ್ಲಿನ ಅನಂತ್, ಲಾಕಪ್‌ನಲ್ಲಿ ಖೈದಿಯೊಬ್ಬನನ್ನು ಪ್ರಶ್ನಿಸುತ್ತಾ ಮಿತಿಮೀರಿ ಥಳಿಸುತ್ತಾನೆ. ಪರಿಣಾಮ ಖೈದಿಯ ಸಾವು. ಲಾಕಪ್ ಸಾವಿನ ಕೇಸು ಅನಂತ್ ಕೊರಳಿಗೆ ಸುತ್ತಿಕೊಳ್ಳುತ್ತದೆ. ಅದರಿಂದ ಹೊರ ಬರಲು ಅನಂತ್‌ಗೆ ಒಂದೇ ದಾರಿ ಎಂದರೆ ರಾಮ್ ಶೆಟ್ಟಿಯ ಆಶ್ರಯ ಎಂದು ಅವನ ಸ್ನೇಹಿತರೇ ಉಪಾಯ ಹೇಳುತ್ತಾರೆ. ಅನಂತ್ ನ ಗೊಂದಲಗಳು..ನಿಸ್ಸಹಾಯಕತೆ..ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ಹೆಜ್ಜೆಯನ್ನು ಮುಂದಿಡಲಾಗದ ಅವನ ಸ್ಥಿತಿ.. ಇಂಥ ವ್ಯವಸ್ಥೆಯೆಂಬ ಹೆಮ್ಮರಕ್ಕೆ ಮೂಲಕಾರಣರಾದ ರಾಮ್ ಶೆಟ್ಟಿಗಳಂಥವರೇ ಇರಬಾರದೆಂದು ತೀರ್ಮಾನಿಸಿ ಅವನನ್ನು ಕೊಂದು ಪೋಲಿಸರಿಗೆ ಶರಣಾಗತನಾಗುತ್ತಾನೆ.

ಇದು ಸದ ಪನ್ವಲ್ ಕರ್ ಬರೆದ “ಸೂರ್ಯ’ ಹೆಸರಿನ ಮರಾಠಿ ಸಣ್ಣ ಕಥೆಯಾಧರಿತ ಸಿನಿಮಾ. ಗೋವಿಂದ ನಿಹಲಾನಿ ಯವರನ್ನು ಮೂರು ಸಣ್ಣ ಕಥೆಗಳು ತುಂಬಾ ಕಾಡುತ್ತಿದ್ದವು. ಒಂದು ಪನ್ವಲ್ ಕರ್ ಬರೆದ “ಸೂರ್ಯ’, ಭೀಷ್ಮ ಸಹಾನಿಯವರ “ತಮಸ್’ ಹಾಗೂ ಮಹೇಶ್ ಎಲ್ ಕುಂಭಾರ್ ಕರ್ ನಾಟಕ “ಪಾರ್ಟಿ’.

“ಸೂರ್ಯ’ ಕಥೆಯಲ್ಲಿನ ತಲ್ಲಣ, ಮನುಷ್ಯ ಸಹಜ ಸಂಬಂಧ, ನಿಸ್ಸಹಾಯಕತೆಗಳು ನಿಹಲಾನಿಯವರನ್ನು ತುಂಬಾ ಕಾಡಿದ್ದವು. ಅಪ್ಪ ಮಗುವಿನ ನಡುವಿನ ಸಂಬಂಧದ ತೆರೆ, ತಮ್ಮ ಇಷ್ಟಗಳನ್ನು ಮಕ್ಕಳ ಮೇಲೆ ಹೇರುವ ಪರಿ,ಮಕ್ಕಳ ಮಾನಸಿಕ ವೇದನೆ,ಸಮಾಜದ ಪ್ರಭಾವ,ಪರಿಸ್ಥಿತಿಗಳೊಂದಿಗೆ ರಾಜಿಯಾಗುವ ಜನ,ರಾಜಿಯಾಗದೆ ಜೀವಚ್ಛವದಂತೆ ಬದುಕುತ್ತಾ ನಾಶವಾಗುವ ಜನ..ಇದನ್ನೆಲ್ಲಾ ಈ ಸಿನಿಮಾದಿಂದ ಮಾತ್ರ ತೋರಿಸಲು ಸಾಧ್ಯ ಎಂದು ನಿಹಲಾನಿ ಭಾವಿಸಿದ್ದರು.

ಮೂಲತಃ ನಿಹಲಾನಿ ಛಾಯಾಗ್ರಾಹಕರೂ ಆಗಿರುವುದರಿಂದ ಚಿತ್ರದಲ್ಲಿ ಅತ್ಯಂತ ಸಣ್ಣ ಸಣ್ಣ ಸಂಗತಿಗಳ ಕಡೆ ಅವರು ತೋರುವ ಪ್ರಾಮುಖ್ಯತೆ,ಅದ್ಭುತವಾದ ಕ್ಲೋಸ್ ಅಪ್  ಶಾಟ್ಸ್ ಬೆರಗುಗೊಳಿಸುತ್ತವೆ. ಕ್ಲೋಸ್ ಅಪ್ ಶಾಟ್ಸ್ ಗಳಿಂದಲೇ ಪಾತ್ರಗಳಲ್ಲಿನ ಸಂಘರ್ಷಗಳನ್ನು,ಭಾವೋದ್ವೇಗಗಳ ತೀವ್ರತೆಯನ್ನು ನಾವು ತುಂಬಾ ಸ್ಪಷ್ಟವಾಗಿ ಗಮನಿಸಬಹುದು.

govind nihalani 3

ಚಿತ್ರದಲ್ಲಿ ಅನಂತ್ ನ ಸ್ನೇಹಿತ  ಹೈದರಾಲಿ ವ್ಯವಸ್ಥೆಯೊಂದಿಗೆ  ರಾಜಿಯಾಗುತ್ತಾನೆ.  ಪ್ರಾಮಾಣಿಕತೆ, ನೈತಿಕ  ಮೌಲ್ಯಗಳನ್ನೂ  ನಿರ್ಲಕ್ಷ್ಯಿಸುತ್ತಾನೆ. ಆದರೆ  ವ್ಯವಸ್ಥೆಯ ವಿರುದ್ಧ ಈಜಲು  ಹೋಗಿ ನಾಶವಾಗುವ ಮೈಕ್  ಲೋಬೊ, ತನ್ನ  ಪ್ರಾಮಾಣಿಕತೆಯ  ಕಾರಣದಿಂದಲೇ ಉದ್ಯೋಗದಿಂದ  ಅಮಾನತುಗೊಳ್ಳುತ್ತಾನೆ.  ಬೀದಿಗೆ ಬಿದ್ದು ಭಿಕ್ಷೆ ಬೇಡುವ  ಸ್ಥಿತಿಗೆ ಬರುತ್ತಾನೆ. ಈ ಎರಡು ಸಂಕೀರ್ಣತೆಗಳು ಸಾಕು ಮನುಷ್ಯ ತನ್ನ ಮೌಲ್ಯಗಳ ಬಗ್ಗೆ ಯೋಚಿಸಲು. ಅನಂತನ ಪ್ರಾಮಾಣಿಕತೆಯ ಪ್ರತಿ ಹೆಜ್ಜೆಯನ್ನು ಮೆಚ್ಚುವ, ಅಭಿನಂದಿಸುವ ಮೂಲಕ ಜ್ಯೋತ್ಸ್ನಾ  ಅವನಲ್ಲಿ ಇಳಿಯುವ ಪರಿ ಕೂಡ ಖುಷಿಕೊಡುತ್ತದೆ. ಜ್ಯೋತ್ಸ್ನಾ ಳ ಸಹಜ ನಟನೆಯ ಸೊಬಗು ಮನಸೂರೆಗೊಳ್ಳುತ್ತದೆ.

ರಾಮ್ ಶೆಟ್ಟಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಸದಾಶಿವ್ ಅಮರಾಪುರ್‌ಕರ್ ಗೆ ಇದು ಮೊದಲ ಚಿತ್ರ. ಚಿತ್ರದಲ್ಲಿ ಅವರದು ಕೇವಲ ನಾಲ್ಕು ದೃಶ್ಯ ಅಷ್ಟೇ. ಪೂರ್ತಿಯಾಗಿ ರಂಗಭೂಮಿ ಹಿನ್ನೆಲೆಯಿಂದ ಬಂದ ಸದಾಶಿವ್ ನೀರು ಕುಡಿದಷ್ಟು ಸಹಜವಾಗಿವೆಯೇ ಅಭಿನಯಿಸಿ ನಮ್ಮನ್ನು ಆವರಿಸಿಕೊಳ್ಳುತ್ತಾರೆ. ಅನಂತ್ ನ ಪಾತ್ರದಲ್ಲಂತೂ ಓಂಪುರಿ ನಮ್ಮನ್ನು ಇವತ್ತಿಗೂ ಕಾಡುತ್ತಾರೆ. ಈ ಪಾತ್ರವನ್ನು ಓಂ ಪುರಿ ಹೊರತುಪಡಿಸಿದರೆ ಬೇರೆ ಯಾರಿಂದಲೂ  ಸಾಧ್ಯವಿಲ್ಲ.

ಭಾರತೀಯ ಸಿನಿಮಾಗಳಲ್ಲಿ ಕಡ್ಡಾಯವಾಗಿರುವಂತೆ ಈ ಸಿನಿಮಾದಲ್ಲಿ ಹಾಡುಗಳಿಲ್ಲ. ಖ್ಯಾತ ಮರಾಥಿ ಕವಿ ದಿಲೀಪ್ ಚಿತ್ರೆ ಯವರ ಎರಡು ಉರಿವ ಕೆಂಡದಂಥ ಕವನಗಳನ್ನು ಅನಂತ್ ಓದುತ್ತಾರೆ.

ಚಕ್ರವ್ಯೂಹ್ ಮೇ ಗುಸ್ ನೆ ಸೆ ಪೆಹ್ ಲೇ

ಕೌನ್ ಥಾ ಮೈ ಔರ್ ಕೈಸಾ ಥಾ

ಏ ಮುಜ್ಹೆ ಯಾದ್ ಯಾದ್ ಹೀ ನ ರಹೇಗಾ

ಚಕ್ರವ್ಯೂಹ್ ಮೇ ಗುಸ್ ನೆ ಕೇ ಬಾದ್

ಮೇರೆ ಔರ್ ಚಕ್ರವ್ಯೂಹ್ ಕೆ ಬೀಚ್

ಸಿರ್ಫ್ ಏಕ್ ಜಾನ್ ಲೇವಾ ನಿಕಟ್‌ತಾ ಹೈ

ಇಸ್ಕಾ ಮುಜ್ಹೆ ಪತಾ ಹಿ ನ ಚಲೇಗಾ

‘ತಕ್ಕಡಿಯಲ್ಲಿ ಒಂದು ಕಡೆ ಏನೂ ಮಾಡಲಾಗದ ನಪುಂಸಕತೆ,

ಮತ್ತೊಂದು ಕಡೆ ಪೌರುಷ.

ತಕ್ಕಡಿಯ ಮುಳ್ಳಿನ ಹತ್ತಿರ ಅರ್ಧಸತ್ಯ’ !

ಚಕ್ರವ್ಯೂಹದಂತಹ ಪೋಲಿಸ್ ವ್ಯವಸ್ಥೆ -ನಿಸ್ಸಹಾಯಕ ಅನಂತ್ …

ಸ್ಪಷ್ಟವಾಗಿ ಕಾಣುವ ‘ಅರ್ಧಸತ್ಯ’.

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಪೋಷಕ ನಟ ಹಾಗೂ ಅತ್ಯುತ್ತಮ ಚಿತ್ರಕಥೆ ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ಒಂದು ಜೀವಿತ ಕಾಲಕ್ಕೆ ಆಗುವಷ್ಟು ಪ್ರೇಕ್ಷಕರನ್ನು ಪಡೆದಿದೆ.

ಇದು ಮಾತ್ರ “ಅರ್ಧಸತ್ಯವಲ್ಲ’ !

ಚಿತ್ರ : ಅರ್ಧಸತ್ಯ, ವರ್ಷ-1983, ತಾರಾಗಣ : ಓಂಪುರಿ, ಸ್ಮಿತಾಪಾಟೀಲ್, ಅಮರೀಶ್ ಪುರಿ, ನಾಸಿರುದ್ದೀನ್ ಶಾ, ಸದಾಶಿವ್ ಅಮರಾಪುರ್‌ಕರ್, ಶಫಿ ಇನಾಮದಾರ, ಕವಿತೆಗಳು : ದಿಲೀಪ್ ಚಿತ್ರೆ. ಸಂಗೀತ : ಅಜಿತ್ ವರ್ಮನ್. ಛಾಯಾಗ್ರಹಣ ಮತ್ತು ನಿರ್ದೇಶನ : ಗೋವಿಂದ ನಿಹಲಾನಿ. ಸಮಯ : 130 ನಿಮಿಷ.

This slideshow requires JavaScript.

ಓಲ್ಡ್ ಇಸ್ ಗೋಲ್ಡ್ !