‘ಛೆ ಛೆ ಏನು ಲೈಫ್ ಕಣ್ರೀ ಇದು..ಅದೇ ಮನೆ,ಅದೇ ಆಫೀಸು,ಅದೇ ರೊಟೀನ್ ಮುಖಗಳು..ಅದೇ ಹೆಂಡತಿ, ಅದೇ ಬಸ್ ಎಲ್ಲಾ ಬೋರ್ ಸ್ವಾಮಿ ..ದಿನಾ ಹೀಗೆ ಯಾರಿಗೆ ಬೇಕ್ರೀ ಈ ಟೇಸ್ಟ್ ಲೆಸ್ ಲೈಫು ..ಸತ್ರೆ ಸುಖ ನೋಡ್ರಿ “ಅಂತ ನಿಮಗೇನಾದ್ರೂ ಆಗಾಗ ಅಥವಾ ಅನೇಕ ಸಲ ಅನಿಸುತ್ತಿರಬಹುದಲ್ವಾ?
(ಹಾಗಂತ ಅನಿಸಲೇ ಬೇಕಂತ ಏನೂ ನಿಯಮ ಇಲ್ಲ ಬಿಡಿ)ಆದರೆ ಇಂಥದರಲ್ಲೇ  ಸುಖ ಇದೆ ಕಣ್ರೀ ,ಹೊಸತನ ಇದೆ..ನಿಮಗೆ ಅದು ಕಾಣ್ತಿಲ್ಲ ಅಂದ್ರೆ ನಿಮ್ಮಲ್ಲೇ ಏನೋ ಸಮಸ್ಯೆ ಇದೆ ಅಂತ ಅರ್ಥ ..ಅಂತಾನೆ ಫ್ರೆಂಚ್ ಕಾರ್ಟೂನಿಸ್ಟ್ ಸೆಂಪೆ .
ಜಗತ್ತಿನ ಪುಟ್ಟ ಪುಟ್ಟ ಸಂತಸಗಳು ಮತ್ತು ಕ್ಷಣ ಹೊತ್ತಿನ ಸೋಲುಗಳು ,ಸಿಲ್ಲಿ ಸಿಲ್ಲಿ ಹುಚ್ಚುಗಳು ,ತಕ್ಷಣದ ಖುಷಿಗಳು ,ಕೋಪ ತಾಪಗಳು ಮತ್ತು ಅನುನಿತ್ಯದ
ಜಗಳಗಳಲ್ಲಿ ಅದ್ಭುತವಾದ ಹಾಸ್ಯ ವಿರುತ್ತದೆ.ಅವರ ಮುಗ್ಧತೆ,ಆವೇಶಗಳು,ಹುಂಬತನಗಳು,ದಿಮಾಕುಗಳು ಸೆಂಪೆಯ ಕ್ರೋಕ್ವಿಲ್ ನಿಬ್ ನಲ್ಲಿ ಚೆಂದನೆಯ ನಗಿಸುವ ಕಾರ್ಟೂನ್ ಗಳಾಗುತ್ತವೆ.ಪ್ರತಿನಿತ್ಯ ಜಗಳವಾಡುವ ,ಹೊಡೆದಾಡುವ ಗಂಡ ಹೆಂಡಿರ ನಡುವಿನಿಂದಲೇ ೧೩ ಭಾಗಗಳ ಕಾರ್ಟೂನ್ ಎಪಿಸೋಡ್ ಎಳೆದು ಬಿಡುತ್ತಾನೆ.
ದೊಡ್ಡ ದೊಡ್ಡ ಬಂಗಲೆಗಳಲ್ಲಿನ ಚಿಕ್ಕ ಚಿಕ್ಕ ಮನುಷ್ಯರು ,ಸಣ್ಣ ಸಣ್ಣ ಖುಷಿಗಳಿಗಾಗಿ ಜೇಬುಗಳನ್ನು ತಡಕಾಡುತ್ತಾ ಅಪ್ ಸೆಟ್ ಆಗೋದು ಇಂಥವೆಲ್ಲ ಸೆಂಪೆ ಗೆ ಸೊಗಸಾದ ಕಾರ್ಟೂನ್ ಸಬ್ಜೆಕ್ಟ್ ಗಳಾಗುತ್ತವೆ.
ಜೀನ್ ಜಾಕ್ ಸೆಂಪೆ (Jeen Jacques Semp’e)ಗೆ ಸದ್ಯ ೭೭ ವರ್ಷ.ಜಗತ್ತಿನ ಲೆಕ್ಕ ವಿಲ್ಲದಷ್ಟು ಪತ್ರಿಕೆಗಳಿಗೆ ಕಾರ್ಟೂನು ಗಳನ್ನೂ ಮಾಡಿದ್ದಾರೆ.ಪ್ರತಿಷ್ಟಿತ ಕಾರ್ಪೋರೆಟ್ ಸಂಸ್ಥೆಗಳಿಗೆ ಭಿತ್ತಿ ಚಿತ್ರಗಳನ್ನು ಮಾಡಿದ್ದಾರೆ.ಆಸ್ಟರಿಕ್ಸ್  ಕಾಮಿಕ್ಸ್ ಸೃಷ್ಟಿ ಕರ್ತರಲ್ಲಿ ಒಬ್ಬರಾದ ರೆನೆಗಾಸ್ಕಿಯೊಂದಿಗೆ ಸೇರಿ ಮತ್ತೊಂದು ವಿಚಿತ್ರವಾದ ಕಾಮಿಕ್ ಸಾಹಸವನ್ನು ಮಾಡಿದ್ದಾನೆ.ವಿಪರೀತವಾಗಿ ತಲೆ ತಿನ್ನೋರು,ವಿಚಿತ್ರವಾಗಿ ಕೊರೆಯೋರು,ಸುಮ್ಮನೆ ನಾನ್ ಸ್ಟಾಪ್ ಬಡಾಯಿ ಕೊಚ್ಚಿ ಕೊಳ್ಳೋರು,ಸೂಡೋ ಇಂಟೆಲೆಕ್ಟುವಲ್ಸ್ ,ಸಮಯ ಸಿಕ್ರೆ ಹೆಂಡತಿಯನ್ನ ಹೇಗಾದ್ರೂ ಮಾಡಿ ಮುಗಿಸಲು ಯೋಚಿಸುವ ಗಂಡಂದಿರು,ಗಂಡನಿಂದ ಬೇಸತ್ತ ಹೆಣ್ಣು ಮಕ್ಕಳು ಹೀಗೆ ಚಿತ್ರ ವಿಚಿತ್ರ ಸಂಗತಿಗಳ ಮೇಲೆ ,ವಿಷಯಗಳ ಮೇಲೆ ಸೆಂಪೆ ಮಾಡಿದ ಕಾರ್ಟೂನುಗಳನ್ನೂ ಓದಿ ಓದಿ ನೋಡಿ ನೋಡಿ ಸಾಯಬೇಕಷ್ಟೇ.!
ಒಬ್ಬ ಕಲಾವಿದ ಬದುಕನ್ನು ನೋಡುವ ರೀತಿ ನಿಮಗೆ ಗೊತ್ತಾಗಬೇಕಾದರೆ ನೀವು ಸೆಂಪೆ ಯನ್ನು ನೋಡಿ.. ಸೂಕ್ಷ್ಮತೆಯೇ ಜೀವಾಳವಾದ ಅವನ ಕಾರ್ಟೂನು ಗಳನ್ನು ನೋಡಿ.ನಿಮಗೆ ಖಂಡಿತವಾಗಿಯೂ ಜ್ಞಾನೋದಯ ವಾಗುತ್ತದೆ.ಅವನ ಕಾರ್ಟೂನು ಸಂಗ್ರಹಗಳ ಶೀರ್ಷಿಕೆ ನೋಡಿ.”Nothing is simple,every thing is complicated”,sunny spells and mixed messages,”womens and childrens are first” ಹೀಗೆ..
ನಮ್ಮಲ್ಲೊಂದು ಭ್ರಮೆ ಇದೆ.ರಾಜಕೀಯ ಕಾರ್ಟೂನುಗಳ ಹೊರತಾಗಿ ಬೇರೆ ಕಾರ್ಟೂನುಗಳು ,ಕಾರ್ಟೂನ್ ಗಳೇ ಅಲ್ಲ ಅಂತ.ದಯಮಾಡಿ ಆ ಅಜ್ಞಾನ ದಿಂದ ಹೊರಬಂದು ಸೆಂಪೆ ಕಾರ್ಟೂನುಗಳನ್ನು ನೋಡಿ ನಿಮಗೆ ಗೊತ್ತಾಗುತ್ತದೆ ಹೊಸ ಜಗತ್ತಿನ ಬಗ್ಗೆ.
ಸೆಂಪೆ ಯ ಬಾಲ್ಯ ಕೂಡ ವಿಚಿತ್ರವಾಗಿದೆ.೧೯೩೨ ರಲ್ಲಿ ಜನಿಸಿದ ಸೆಂಪೆ ತನ್ನ ಅತಿರೇಕದ ತುಂಟ ತನದಿಂದ ಮತ್ತು ಅಶಿಸ್ತಿನ ವರ್ತನೆಯಿಂದ ಶಾಲೆಯಿಂದ ಹೊರ ದಬ್ಬಲ್ಪಡುತ್ತಾನೆ.ಮುಂದೆ ಅಂಚೆ ಕಚೇರಿ ,ಬ್ಯಾಂಕ್ ,ರೇಲ್-ರಸ್ತೆ ಸಿಬ್ಬಂದಿ ಯಂತಹಹುದ್ದೆಗಳಿಗೆ ಎಷ್ಟೇ  ಪ್ರಯತ್ನಿಸಿದರೂ ಯಶಸ್ಸು ಕಾಣುವದಿಲ್ಲ.ಪ್ರತಿ ಪರೀಕ್ಷೆಯಲ್ಲೂ ಫೇಲ್ ಆಗುತ್ತಲೇ ಹೋಗುತ್ತಾನೆ.ಕೊನೆಗೆ ತಲೆ ಕೆಟ್ಟು ಮನೆ ಮನೆ ತಿರುಗುತ್ತ ಹಲ್ಲು ಪುಡಿ ಮಾರಲು ತೊಡಗುತ್ತಾನೆ.
ಇದಕ್ಕೂ ಮೊದಲು ಸ್ವಲ್ಪ ಕಾಲ  ಸೆಂಪೆ ಸೈಕಲ್ ಮೇಲೆ ವೈನ್ ಅನ್ನು ಮಾರಾಟ ಮಾಡುವ ಉದ್ಯೋಗವನ್ನು ಮತ್ತು ಮಕ್ಕಳ ಕ್ಯಾಂಪ್ ಒಂದರಲ್ಲಿ ಸೂಪರ್ವೈಜರ್ ಆಗಿಯೂ  ದುಡಿದಿದ್ದ.
೧೯೫೦ ರಲ್ಲಿ ಸೆಂಪೆ ಏಕಾಏಕಿ ಸೈನ್ಯದ ಕಡೆ ಆಕರ್ಷಿತ ನಾಗಿ ಸೈನ್ಯ ಸೇರುತ್ತಾನೆ.”ಅದೊಂದೇ ಜಾಗ ನನಗೆ ಉಣ್ಣಲು ಊಟ ಮತ್ತು ಮಲಗಲು ಹಾಸಿಗೆ ಕೊಟ್ಟದ್ದು “ಎಂದು ಹೇಳುವ ಸೆಂಪೆ ಅಲ್ಲಿ ಕೂಡ ಹೆಚ್ಚು ದಿನ ಇರುವುದಿಲ್ಲ.ಸೈನ್ಯ ಸೇರುವಾಗ ದಾಖಲೆಗಳಲ್ಲಿ ಫ್ರಾಡ್ ಮಾಡಿದ್ದನೆಂಬ ಕಾರಣದಿಂದ ಹೊರಹಾಕುತ್ತಾರೆ.
ಅಲ್ಲಿಂದ ಸೆಂಪೆ ಗೆ ಚಿತ್ರಕಲೆಯೇತ್ತ ವಿಪರೀತ ಆಸಕ್ತಿ ಬಂದುಬಿಡುತ್ತದೆ.ಒಂದು ರೀತಿಯ ವ್ಯಂಗಚಿತ್ರಗಳ ಮಂಪರು, ಹುಚ್ಚು ಅವನನ್ನು ಆವರಿಸಿಕೊಂಡು ಬಿಡುತ್ತದೆ.
ಅದೇ ವ್ಯಾಮೋಹದಿಂದ ಅವನು ಪ್ಯಾರಿಸ್ ಗೆ ಬರುತ್ತಾನೆ.ಅಲ್ಲಿ ತಾನು ಬರೆದ ಕಾರ್ಟೂನು ಗಳನ್ನು ಪತ್ರಿಕೆಗಳಿಗೆ ಮಾರಲು ಪ್ರಾರಂಭಿಸುತ್ತಾನೆ.ಮುಂದೆ ಖ್ಯಾತ ವ್ಯಂಗಚಿತ್ರಕಾರ ಗೋಸಿನಿ ಯೊಂದಿಗೆ ‘ನ್ಯೂ ಯಾರ್ಕರ್ ಟೈಮ್ಸ್’ನಲ್ಲಿ ಕಾರ್ಟೂನಿಸ್ಟ್ ಆಗುತ್ತಾನೆ.
ಬಿಳಿ ಹಾಳೆಗಳ ಮೇಲೆ ಒಮ್ಮೆ ರೋಲರ್ ನಂತೆ ,ಒಮ್ಮೆ ಹಾವಿನಂತೆ ಹರಿದಾಡುವ ಸೆಂಪೆಯ ಗೆರೆಗಳಲ್ಲಿ ಅಗೋಚರ ಮಾಂತ್ರಿಕ ಶಕ್ತಿಯ ಮೋಡಿ ಇದೆ.ನಾಜೂಕುತನವಿದೆ.ಜೇಡರ ಬಲೆಯಂಥ ಸೊಗಸುಗಾರಿಕೆ ಇದೆ.ವಿಶಿಷ್ಟ ಶೈಲಿಯ ಗಗನಚುಂಬಿ ಕಟ್ಟಡ ರಸ್ತೆಗಳ ಉದ್ದನೆಯ ಕಾರಿಡಾರ್ ಗಳಲ್ಲಿ ಹಾಸ್ಯದ ಹೊನಲು ಹರಿಸುವ ಸೆಂಪೆ ಯ ಕಾರ್ಟೂನುಗಳ ಖಾಲಿಜಾಗ ಗಳು ,ನೀರಿನಿದ ತೊಳೆದಂತಹ ಪರಿಣಾಮಕಾರಿ ಜಲ ವರ್ಣ ಸಂಯೋಜನೆ ಇವು ಕೇವಲ ಸೆಂ ಪೆ ಮಾರ್ಕಿನ  ಅದ್ಭುತಗಳು.